ಯುವ ಸಂಗೀತಗಾರರು ಮತ್ತು ವೃತ್ತಿಪರ ಸಂಗೀತಗಾರರನ್ನು ಪ್ರೇರೇಪಿಸಲು ಪ್ರತಿ ವರ್ಷ ಜೂನ್ 21ರಂದು ವಿಶ್ವ ಸಂಗೀತ ದಿನ ಆಚರಿಸಲಾಗುತ್ತದೆ. ಸಂಗೀತ ಬದುಕಿನ ಒಂದು ಭಾಗ. ಸಂಗೀತದ ಮೇಲೆ ಒಲವಿದ್ದರೂ, ಇಲ್ಲದಿದ್ದರೂ ಅದರ ಪರಿಣಾಮ ದೇಹ ಮತ್ತು ಮನಸ್ಸಿನ ಮೇಲೆ ಬೀರುತ್ತದೆ. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ಲೇಖನದ ಗುರಿ.
| ಎನ್. ಗುರುನಾಗನಂದನ
‘ನಾದ ಮೊದಲ, ಭಾವ ಮೊದಲ, ವೀಣೆ ಮೊದಲ, ಸರಿಗಮ ಸ್ವರ ಮೊದಲ..’ ಎಂಬ ಹಾಡಿನ ಸಾಲು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಒಂದು ದುಃಖದ ಹಾಡನ್ನು ಕೇಳಿದಾಗ ಮನಸ್ಸು ಭಾರವಾಗುತ್ತದೆ. ಅದೇ ಒಂದು ಜೋಶ್ ಇರುವ ಹಾಡು ಕೇಳಿದಾಗ ಉತ್ಸಾಹಿತರಾಗುತ್ತೇವೆ. ಸಂಗೀತ ಪ್ರಚೋದಕದಂತೆ ಕಾರ್ಯ ನಿರ್ವಹಿಸುತ್ತದೆ. ಎಷ್ಟೋ ಬಾರಿ ಹಾಡು ಕೇಳುತ್ತ ಕೆಲಸ ಮಾಡಿ ಮುಗಿಸುತ್ತೇವೆ. ಆದರೆ ಕೆಲಸದ ಶ್ರಮ ದೇಹಕ್ಕೆ ಅರಿವಾಗುವುದಿಲ್ಲ. ಅದು ಸಂಗೀತಕ್ಕೆ ಇರುವ ಶಕ್ತಿ. ಅಂದರೆ ದೇಹ-ಮನಸ್ಸಿಗೆ ಆದ ನೋವನ್ನು ಉಪಶಮನ ಮಾಡುವ ಕ್ರಿಯೆ ಸಂಗೀತಕ್ಕೆ ತಿಳಿದಿದೆ. ಸಂಗೀತ ಮೆದುಳಿಗೆ ಶ್ರವಣ, ದೃಶ್ಯ ಮತ್ತು ದೈಹಿಕ ಮಾಹಿತಿ ರವಾನೆ ಮಾಡುತ್ತದೆ. ಒಂದು ಹಾಡನ್ನು ಕೇಳುವಾಗ ತಲೆಯಲ್ಲಿ ಚಿತ್ರ ಸೃಷ್ಟಿಯಾಗುತ್ತದೆ. ಹಾಡಿನ ತಾಳಕ್ಕೆ ಕೈ-ಕಾಲನ್ನು ಆಡಿಸುತ್ತೇವೆ. ಇದರಿಂದ ದೇಹದಲ್ಲಿ ರಕ್ತ ಚಲನೆ ಹೆಚ್ಚಾಗುತ್ತದೆ ಮತ್ತು ಭಾವನೆಯನ್ನು ಉತ್ತೇಜಿಸುವ ಹಾಮೋನ್ಗಳು ಉತ್ಪಾದನೆ ಆಗುತ್ತವೆ. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದು.
ಸಂಗೀತಕ್ಕೆ ಕಲ್ಲೂ ಕರಗುತ್ತದೆ!
ಮ್ಯೂಸಿಕ್ ಥೆರಪಿ ಸಂಗೀತ ಶಾಸ್ತ್ರ, ಮನೋವಿಜ್ಞಾನ ಮತ್ತು ನರವಿಜ್ಞಾನವನ್ನು ಒಳಗೊಂಡು ಶರೀರ ಮತ್ತು ಮನಸ್ಸಿನ ಅಸಮತೋಲನವನ್ನು ಸರಿ ಪಡಿಸುತ್ತದೆ. ಒಬ್ಬ ವ್ಯಕ್ತಿ ಮಾನಸಿಕ, ದೈಹಿಕ ಅಥವಾ ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂಗೀತ ಸಾಧನದ ಮೂಲಕ ಪರಿಹರಿಸುವುದೇ ಮ್ಯೂಸಿಕ್ ಥೆರಪಿ. ಸಂಗೀತ ಸಂಯೋಜನೆ, ಅದನ್ನು ಅಭಿವೃದ್ಧಿಗೊಳಿಸುವುದು, ರಾಗ-ತಾಳಕ್ಕೆ ತಕ್ಕ ಸಾಹಿತ್ಯ ರಚಿಸುವುದು. ಹೊಸ ವಾದ್ಯವನ್ನು ಕಲಿಯುವುದು ಸಾಮಾನ್ಯವಾಗಿ ಬಳಸುವ ಥೆರಪಿ ತಂತ್ರಗಳು. ಇದರ ಮುಖಾಂತರ ದೀರ್ಘ ಕಾಲದ ರೋಗಗಳಿಗೆ ಚಿಕಿತ್ಸೆ ನೀಡಬಹುದು. ಒತ್ತಡವಾದಾಗ ರಕ್ತದಲ್ಲಿ ಕಾರ್ಟಿಸೋಲ್ ಎಂಬ ಹಾರ್ವೇನ್ ಮಟ್ಟ ಹೆಚ್ಚಾಗುತ್ತದೆ. ಸಂಶೋಧನೆಗಳ ಪ್ರಕಾರ ಮ್ಯೂಸಿಕ್ ಥೆರಪಿ ಕಾರ್ಟಿಸೋಲ್ ಮಟ್ಟವನ್ನು ತಗ್ಗಿಸಿ ಮಿದುಳನ್ನು ಜಾಗೃತಗೊಳಿಸುವ ಬೀಟಾ ಮತ್ತು ನಿರಾಳಗೊಳಿಸುವ ಆಲ್ಪಾ ತರಂಗಗಳನ್ನು ಹೆಚ್ಚು ಮಾಡುತ್ತದೆ. ಕ್ಯಾನ್ಸರ್ ಮತ್ತು ಎಚ್ಐವಿಯಂಥ ರೋಗಗಳ ಉಪಶಮನದಲ್ಲಿ ಸಂಗೀತ ಚಿಕಿತ್ಸೆ ಬಹಳ ಫಲಕಾರಿ. ಅಂದರೆ, ಹ್ಯಾಪಿ ಹಾಮೋನ್ ಎಂದೇ ಕರೆಯಲಾಗುವ ಎಂಡಾರ್ಫಿನ್ ಉತ್ಪತ್ತಿಯಿಂದ ನೋವು ಕಮ್ಮಿಯಾಗುತ್ತದೆ. ಉದಾಹರಣೆಗೆ ಮೈಸೂರಿನ ನ್ಯೂರೋ ರಿಹ್ಯಾಬಿಟೇಷನ್ ಸೆಂಟರ್ನಲ್ಲಿದ್ದ 10 ವರ್ಷದ ಬಾಲಕಿಗೆ ಮೆದುಳಿನಲ್ಲಾದ ಗಾಯದಿಂದ ನೆನಪು ಮತ್ತು ಕಲಿಯುವ ಶಕ್ತಿ ಕುಗ್ಗಿ ಹೋಗಿತ್ತು. ಆಕೆಗೆ ಶಾಸ್ತ್ರೀಯ ಸಂಗೀತದ ಗಾಯನ ಮತ್ತು ವಾದ್ಯದ ಮೂಲಕ ಚಿಕಿತ್ಸೆ ನೀಡಲಾಯಿತು. ಕೇವಲ 6 ತಿಂಗಳ ನಂತರ ರಾಗಗಳ ಮೂಲಕ ಬಹಳಷ್ಟು ಘಟನೆಗಳನ್ನು ಜ್ಞಾಪಕ ಮಾಡಿಕೊಳ್ಳಲು ಶುರುಮಾಡಿದಳು. ಅದರೊಂದಿಗೆ ಸುಲಭವಾಗಿ ಓದಿನಲ್ಲೂ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು.
ರಾಗಕ್ಕೆ ತಕ್ಕ ಭಾವನೆ
ಸಂಗೀತದ ಶಾಸ್ತ್ರದಲ್ಲಿ ಬಹಳಷ್ಟು ರಾಗಗಳಿವೆ. ಪ್ರತಿ ರಾಗವೂ ವಿವಿಧ ಭಾವನೆಗಳಿಗೆ ಹೊಂದುತ್ತದೆ. ಶಾಸ್ತ್ರೀಯ, ಜಾನಪದ, ರಾಕ್, ಜಾಝ್ ಮತ್ತು ಹೆವೀ ಮೆಟಲ್ ಪ್ರಕಾರಗಳನ್ನು ಒಳಗೊಂಡಿದ್ದ ಕ್ಯಾಲಿಫೋರ್ನಿಯಾದ ರ್ಬಕ್ಲಿ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಕೇಳುಗರಲ್ಲಿ ಮುಖ್ಯವಾಗಿ ವಿನೋದ, ಸಂತೋಷ, ಕಾಮ, ಸೌಂದರ್ಯ, ನೆಮ್ಮದಿ, ದುಃಖ, ಕನಸು, ಗೆಲುವು, ಆತಂಕ, ಹೆದರಿಕೆ, ಕಿರಿಕಿರಿ, ವಿರೋಧಿತನ ಮತ್ತು ಪ್ರೇರಣೆ ಭಾವನೆಗಳನ್ನು ಸಂಗೀತ ಸೃಷ್ಟಿ ಮಾಡುತ್ತದೆ. ಒಂದು ಸೂಪರ್ ಹೀರೋವಿನ ಸಿನಿಮಾ ನೋಡಿಕೊಂಡು ಹೊರಗೆ ಬರುತ್ತೇವೆ. ನಂತರ ಸಿನಿಮಾದ ಹಿನ್ನಲೆ ಸಂಗೀತ ಕೇಳಿದಾಗ ಹೀರೋವಿನ ಅನುಕರಣೆ ಮಾಡುತ್ತೇವೆ. ನಾವು ಸೂಪರ್ ಹೀರೋ ಅಲ್ಲದೆ ಹೋದರೂ ಮನಸ್ಸಿನಲ್ಲಿ ಆ ಭಾವನೆಯನ್ನು ಸಂಗೀತ ಹುಟ್ಟಿಸುತ್ತದೆ. ಭಾರತೀಯ ಸಂಗೀತ ನವರಸಗಳ ಆಧಾರದ ಮೇಲಿದೆ. ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದ ಸಂಶೋಧನೆ ಪ್ರಕಾರ ದೇಸಿ, ತಿಲಕ್ ಕಮೋದ್, ಆನಂದಭೈರವಿ, ನಾಟಾ ರಾಗಗಳು ಶಾಂತಿ ಮತ್ತು ಸಂತೋಷದ ಭಾವನೆಯನ್ನು ಹುಟ್ಟಿಸುತ್ತವೆ. ಶ್ರೀ, ಮಿಯಾನ್ ಕೀ ತೋಡಿ, ಶಿವರಂಜಿನಿ, ವಸಂತಭೈರವಿ ರಾಗಗಳು ದುಃಖ ಮತ್ತು ಉದ್ವಿಗ್ನ ಭಾವನೆಗಳಿಗೆ ಕಾರಣವಾಗುತ್ತವೆ. ತಜ್ಞರ ಪ್ರಕಾರ ಪುರಿಯಾ ಧನಶ್ರೀ ರಾಗ ಅಸಿಡಿಟಿಯನ್ನು ದೂರಗೊಳಿಸುತ್ತದೆ. ದರ್ಬಾರಿ ರಾಗ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಿಂದೋಳ ರಾಗವು ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.
ನೆನಪಿಲ್ಲವೆಂದರೆ ಸಂಗೀತವಿದೆ!
ಶಾಲೆಯಲ್ಲಿ ಬಹಳಷ್ಟು ರೈಮ್ಸ್, ಪದ್ಯಗಳನ್ನು ಓದಿದ್ದೇವೆ. ಆದರೆ ‘ಎಬಿಸಿಡಿಇಎಫ್ಜಿ’ ಪದ್ಯ ಎಷ್ಟೇ ವರ್ಷವಾದರೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಆ ಟ್ಯೂನ್ ಮೆದುಳಿನಲ್ಲಿ ಅಚ್ಚಳಿಯದಂತಿದೆ. ಜ್ಞಾಪಕ ಇಟ್ಟುಕೊಳ್ಳುವ ಸಾಧನವಾದ ನಿಮೊನಿಕ್ನಲ್ಲಿ ಸಂಗೀತ ಕೂಡ ಒಂದು ವಿಧಾನ. ಉದಾಹರಣೆಗೆ ಆವರ್ತ ಕೋಷ್ಟಕವನ್ನು (ಪೀರಿಯಾಡಿಕ್ ಟೇಬಲ್) ಇಷ್ಟವಾದ ಹಾಡಿನ ರಾಗಕ್ಕೆ ಸರಿಹೊಂದಿಸಿಕೊಂಡು ಕಲಿತಾಗ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದಕ್ಕೆ ಕಾರಣವೇನೆಂದರೆ ಕಲಿತಿದ್ದನ್ನು ಪುನಃ ನೆನಪಿಸಿಕೊಳ್ಳುವ ಮೆದುಳಿನ ಪ್ರೀ-ಫ್ರಂಟಲ್ ಕಾರ್ಯವನ್ನು ಮ್ಯೂಸಿಕಲ್ ನಿಮೊನಿಕ್ ಉತ್ತೇಜಿಸುತ್ತದೆ. ಮೊದಲೇ ನೆನಪಿನಲ್ಲಿದ್ದ ಹಾಡಿನ ರಾಗದೊಂದಿಗೆ ಕಲಿಯಬೇಕಾದ ವಿಷಯ ಹೊಂದಿಕೊಂಡು ನೆನಪು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ನೆನಪಿನ ತೊಂದರೆ ಇರುವವರಿಗೆ ಈ ತಂತ್ರ ಬಳಸುತ್ತಾರೆ. ಮೌಖಿಕ ಸ್ಮರಣೆಯ ಮೂಲಕ ತರಬೇತಿ ಪಡೆದುಕೊಂಡವರಿಗೆ ಹೋಲಿಸಿದಾಗ ಸಂಗೀತ ಜ್ಞಾಪಕಶಾಸ್ತ್ರವನ್ನು ಬಳಸಿಕೊಂಡು ಕಲಿತವರ ನೆನಪಿನ ಶಕ್ತಿ ಮತ್ತು ಉಚ್ಚಾರಣೆ ಉತ್ತಮವಾಗಿತ್ತು ಎಂದು ಟೊರೆಂಟೊ ವಿಶ್ವ ವಿದ್ಯಾಲಯದ ಸಂಗೀತ ಮತ್ತು ಆರೋಗ್ಯ ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನ ಹೇಳುತ್ತದೆ. ಸಂಗೀತಕ್ಕೆ ನೆನಪುಗಳು ಅಂಟಿಕೊಂಡಿರುತ್ತವೆ. ಖುಷಿಯಲ್ಲಿ ಇದ್ದಾಗ ಕೇಳಿದ ಸಂಗೀತವನ್ನು ದುಃಖದ ಸಮಯದಲ್ಲಿ ಕೇಳಿದಾಗ ಸಂತೋಷದ ಸಮಯ ನೆನಪಾಗುತ್ತದೆ.
ಇದು ವಿಶ್ರಾಂತಿಯ ಬೌಲ್
ಸಾಮವೇದದಿಂದ ಸಂಗೀತ ಬಂತು. ಅದರೊಂದಿಗೆ ಮ್ಯೂಸಿಕ್ ಹೀಲಿಂಗ್ ಕ್ರಿಯೆ ಕೂಡ ಶುರುವಾಯಿತು. ಮನುಷ್ಯನ ದೇಹದಲ್ಲಿ ಕಂಪನ ಇದೆ. ಸಂಗೀತದಲ್ಲಿರುವ ಕಂಪನವನ್ನು ಬಳಸಿಕೊಂಡು ದೇಹದಲ್ಲಿ ಆಗಿರುವ ಕಂಪನದ ಏರುಪೇರನ್ನು ಸರಿಹೊಂದಿಸಬಹುದು. ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಲ್ಲಿಯೂ ಸಾಧ್ಯ. ಸಿಂಗಿಂಗ್ ಬೌಲ್ ಎಂಬುದು ಏಳು ಲೋಹಗಳಿಂದ ಮಾಡಿರುವ ಒಂದು ಬಟ್ಟಲು. ಅದರಿಂದ ಹೊರಬರುವ ವೈಬ್ರೇಷನ್ ದೇಹಕ್ಕೆ ವಿಶ್ರಾಂತಿ ನೀಡಿ ವೇದನೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಕ್ರಿ.ಪೂ 26ನೇ ಶತಮಾನದಿಂದ ಸಿಂಗಿಂಗ್ ಬೌಲ್ ಬಳಕೆಯಲ್ಲಿದೆ. ಇದರ ಕುರಿತು ಬಹಳಷ್ಟು ದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಈಗಿನ ಯುವಕರಲ್ಲಿ ವಿಶ್ರಾಂತಿಯ ಕೊರತೆ ಹೆಚ್ಚಾಗಿದೆ. ಕೆಲಸದ ಒತ್ತಡ ಮುಂತಾದ ಕಾರಣಗಳಿಗೆ ವಿಶ್ರಾಂತಿಯಿಂದ ವಂಚಿತರಾಗುತ್ತಿದ್ದಾರೆ. ಅದು ಹಣ ನೀಡಿ ಕೊಂಡುಕೊಳ್ಳುವ ವಸ್ತುವಲ್ಲ. ಅದಕ್ಕಾಗಿ ಪ್ರತಿದಿನ ಕನಿಷ್ಠ ಪಕ್ಷ 10 ನಿಮಿಷಗಳ ಕಾಲ ರಿಲ್ಯಾಕ್ಸ್ ಮಾಡಬೇಕು. ಸಂಗೀತವನ್ನು ಕೇಳಿದಾಗ ಗೊಂದಲಗಳು ದೂರವಾಗಿ ಮನಸ್ಸು ತಿಳಿಯಾಗುವುದರ ಜತೆ ಆಗ ದೇಹದಲ್ಲಿನ ಕಂಪನ ಸಮವಾಗುತ್ತದೆ. ಅದರೊಂದಿಗೆ ಸಮಸ್ಯೆಗೆ ಪರಿಹಾರವನ್ನು ಚಿಂತಿಸಲು ಸಹಾಯ ಮಾಡುತ್ತದೆ ಎಂದು ಟೆಂಪಲ್ ಆಫ್ ಸಿಂಗಿಂಗ್ ಬೌಲ್ಸ್ ಸ್ಥಾಪಕ ಅಖಿಲ್ಲಾಂಕ ಹೇಳುತ್ತಾರೆ.
ಸಂಗೀತದಿಂದ ಮನರಂಜನೆ ಮಾತ್ರವಲ್ಲ!
ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಸಂಗೀತವಿದೆ. ಕೆಲವು ಶಬ್ದಗಳು ದೇಹಕ್ಕೆ ಮುಟ್ಟಿದರೆ, ನಾದಗಳು ಭಾವವನ್ನು ರ್ಸ³ಸುತ್ತವೆ. ಕೆಲವರಿಗೆ ಹಾಡನ್ನು ಕೇಳುವುದು ಖುಷಿ ಕೊಟ್ಟರೆ, ಕೆಲವರಿಗೆ ವಾದ್ಯಗಳು ಸಂತೋಷ ನೀಡುತ್ತವೆ. ಅನವಶ್ಯಕ ವಿಷಯಗಳಿಂದ ಉಂಟಾಗುವ ಭಾವನೆಯ ಬೊಜ್ಜನ್ನು ಸಂಗೀತ ಕರಗಿಸುತ್ತದೆ. ಆಹಾರ ಪದ್ಧತಿಯಂತೆ ಸಂಗೀತದ ಪದ್ಧತಿ ಕೂಡ ಇದೆ. ಯಾವ ರೀತಿಯ ಸಂಗೀತವನ್ನು ಯಾವ ಮನಸ್ಥಿತಿಯಲ್ಲಿ ಕೇಳಬೇಕು ಎಂಬುದಕ್ಕೆ ಸಂಗೀತ ಪದ್ಧತಿ ಎಂದು ಹೇಳುತ್ತಾರೆ. ವ್ಯಕ್ತಿಯ ಮೂಡ್ಗೆ ಅನುಗುಣವಾದ ಸಂಗೀತವನ್ನು ಸೂಚಿಸುವ ಮೂಲಕ ಕೃತಕ ಬುದ್ಧಿಮತ್ತೆ ಈ ಕೆಲಸವನ್ನು ಮಾಡುತ್ತಿದೆ. ಕೊಳಲಿನಿಂದ ಬರುವ ನಾದದಿಂದ ದೇಹದ ಮೇಲೆ ಆಗುವ ಪ್ರಭಾವ ಬೇರೆ, ಸಿತಾರ್ ಶಬ್ದದಿಂದ ಆಗುವ ಪ್ರಭಾವ ಬೇರೆ. ಅಲ್ಟ್ರಾಸೌಂಡ್ ಸ್ಕಾ್ಯನ್ ಕೂಡ ಶಬ್ದಗಳ ತರಂಗದ ಮೂಲಕ ಕಾರ್ಯನಿರ್ವಹಿಸುತ್ತದೆ. ಇಂತಹ ಸಂಗೀತ ವಿಜ್ಞಾನ ಕುರಿತ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಸಂಗೀತ ಕೇವಲ ಮನರಂಜನೆಗೆ ಸೀಮಿತ ಎಂಬಂತಾಗಿದೆ. ಆದರೆ ನಿಧಾನವಾಗಿ ಸಂಗೀತದ ಬಗ್ಗೆ ಅರಿವು ಮುಡಿಸುವ ಪ್ರಯತ್ನ ಶುರುವಾಗುತ್ತಿದೆ. ಪರೀಕ್ಷೆಯಲ್ಲಿ ಅಂಕ ಕಡಿಮೆಯಾದರೂ ಯಾವುದಾದರೂ ಕಲೆಯನ್ನು ಅಭ್ಯಾಸ ಮಾಡುತ್ತಿದ್ದರೆ ಹೊರದೇಶದ ವಿಶ್ವವಿದ್ಯಾಲಯಗಳಲ್ಲಿ ಸೀಟ್ ಸಿಗುತ್ತಿದೆ. ಹಾಗೆಯೇ ಭಾರತದಲ್ಲಿ ಆದರೆ ಸಂಗೀತದ ವಿಜ್ಞಾನ ಕುರಿತ ಸಂಶೋಧನೆಗಳು ಹೆಚ್ಚಾಗಿ ಮನರಂಜನೆಗೆ ಮೀರಿದ್ದು ಎಂಬ ತಿಳಿವಳಿಕೆ ಬರುತ್ತದೆ ಎಂದು ಕೊಳಲು ವಾದಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಹೇಳುತ್ತಾರೆ.
30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರೂ ಆದ್ರೆ ನೀವೇ ಜವಾಬ್ದಾರಿ: ಎಸ್ಪಿಗೆ ಡಿವೈಎಸ್ಪಿ ಪತ್ರ