ನಕಲಿ ಶಿಕ್ಷಕ ಕರ್ತವ್ಯದಿಂದ ಅಮಾನತು

Published on

ಹುಣಸೂರು: ಮೃತ ಅಣ್ಣನ ಹೆಸರಿನಲ್ಲಿ 24 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ ಆರೋಪದಲ್ಲಿ ಕರ್ತವ್ಯದಿಂದ ಅಮಾನತುಗೊಂಡಿದ್ದ ವ್ಯಕ್ತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇವೆಯಿಂದ ವಜಾಗೊಳಿಸಿ ಜ.20ರಂದು ಆದೇಶಿಸಿದೆ.


ತಾಲೂಕಿನ ಕಟ್ಟೆಮಳಲವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಕಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಣೇಗೌಡ ವಜಾಗೊಂಡ ವ್ಯಕ್ತಿ. ಸಾರ್ವಜನಿಕ ಶಿಕ್ಷಣ ಇಲಾಖೆಯು ವ್ಯಕ್ತಿಯಿಂದ ಈವರೆಗೆ ಪಡೆದ ಸರ್ಕಾರದ ಆರ್ಥಿಕ ಸೌಲಭ್ಯಗಳನ್ನು ವಸೂಲು ಮಾಡಲು ಅಧೀನ ಅಧಿಕಾರಿಗಳಿಗೆ ಸೂಚಿಸಿದೆ. ಪ್ರಕರಣವನ್ನು ಮೊದಲ ಬಾರಿಗೆ ವಿಜಯವಾಣಿ ಪತ್ರಿಕೆ 2022ರ ಮಾರ್ಚ್ 24ರಂದು ಪ್ರಕಟಿಸುವ ಮೂಲಕ ಸಾರ್ವಜನಿಕರ ಮತ್ತು ಶಿಕ್ಷಣ ಇಲಾಖೆ ಗಮನಸೆಳೆದಿತ್ತು.


ಘಟನೆ ವಿವರ: ಮೂಲತಃ ಕೆ.ಆರ್.ನಗರ ತಾಲೂಕು ಡಿ.ಕೆ.ಕೊಪ್ಪಲು ರಾಮೇಗೌಡರ ಅವರ ಪುತ್ರರ ಪೈಕಿ ಲಕ್ಷ್ಮಣೇಗೌಡ ಎರಡನೆಯವರು. ಕೇವಲ 8 ತರಗತಿ ವ್ಯಾಸಂಗ ಮಾಡಿದ್ದ ಲಕ್ಷ್ಮಣೇಗೌಡ ತನ್ನ ಅಣ್ಣ ಲೋಕೇಶ್‌ಗೌಡ ಶಿಕ್ಷಕನಾಗಿ ನೇಮಕಗೊಂಡ ಕೆಲ ದಿನಗಳಲ್ಲೇ ಕರ್ತವ್ಯಕ್ಕೂ ಹಾಜರಾಗುವ ಮುನ್ನವೇ ಮೃತಪಟ್ಟಿದ್ದರು. ಈ ಅವಕಾಶವನ್ನೇ ಬಳಸಿಕೊಂಡು ತಾನೇ ಲೋಕೇಶ್‌ಗೌಡ ಎಂದು ತಿಳಿಸಿ ಶಿಕ್ಷಕನಾಗಿ ನೇಮಕಗೊಂಡಿದ್ದ. ಈ ಹಿಂದೆ ಅಂಕಪಟ್ಟಿಯ ಮೇಲೆ ವಿದ್ಯಾರ್ಥಿಯ ಭಾವಚಿತ್ರ ಇರುತ್ತಿರಲಿಲ್ಲ. ಇದನ್ನೇ ದಾಳವಾಗಿ ಲಕ್ಷ್ಮಣೇಗೌಡ ಬಳಸಿಕೊಂಡಿದ್ದ. ಮಾತ್ರವಲ್ಲದೇ ತನ್ನ ಅಣ್ಣನ ಪತ್ನಿಗೆ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಒಪ್ಪಂದವನ್ನೂ ಮಾಡಿಕೊಂಡಿದ್ದ.


ಹೋರಾಟ: ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಇಂಟೆಕ್ ರಾಜು ಈ ಕುರಿತು ಲೋಕಾಯುಕ್ತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಥಮ ಹಂತದ ಮಾಹಿತಿ ಕಲೆಹಾಕುವ ವೇಳೆಯೇ ನಕಲಿ ಶಿಕ್ಷಕನ ಮೇಲಿನ ಆರೋಪದಲ್ಲಿ ಸತ್ಯಾಂಶವಿರುವುದನ್ನು ಮನಗಂಡ ಇಲಾಖೆ ಆತನನ್ನು ಕರ್ತವ್ಯದಿಂದ ಅಮಾನತ್ತಿನಲ್ಲಿಟ್ಟಿತ್ತು.


ಹಲವಾರು ಕಾರಣಗಳಿಂದ ಪ್ರಕರಣವನ್ನು ಪೊಲೀಸ್ ಇಲಾಖೆಗೂ ತನಿಖೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿತ್ತು. ಪೊಲೀಸರು ಆರೋಪಿಯನ್ನು ಒಂದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲೂ ಇಟ್ಟಿದ್ದರು. ನಂತರ ಇಲಾಖೆ ವಿಚಾರಣಾಧಿಕಾರಿಗಳ ಮೂಲಕ ಕೈಗೊಂಡ ಸುದೀರ್ಘ ವಿಚಾರಣೆಯ ನಂತರ ಆರೋಪಿ ಸರ್ಕಾರಕ್ಕೆ ವಂಚಿಸಿ ಸರ್ಕಾರಿ ಉದ್ಯೋಗ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ (ಜ.20) ನಕಲಿ ಶಿಕ್ಷಕ ಲಕ್ಷ್ಮಣೇಗೌಡರನ್ನು ಕರ್ತವ್ಯದಿಂದ ವಜಾಗೊಳಿಸಿದೆ.

ಮಾತ್ರವಲ್ಲದೆ ಈವರೆಗೆ ಆರೋಪಿ ಸರ್ಕಾರದಿಂದ ಪಡೆದಿರುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ವಸೂಲು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಜಿಲ್ಲಾ ಉಪನಿರ್ದೇಶಕ ಪಾಂಡು ಅವರು ನೀಡಿರುವ ಆದೇಶದಲ್ಲಿ ಸೂಚಿಸಿದ್ದಾರೆ. ಒಂದು ವೇಳೆ ಆರೋಪಿ ಆರ್ಥಿಕ ಸೌಲಭ್ಯವನ್ನು ಹಿಂದಿರುಗಿಸದಿದ್ದಲ್ಲಿ ಆತನ ವಿರುದ್ಧ ಸಿವಿಲ್ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ನಕಲಿ ಶಿಕ್ಷಕನಾಗಿ ಒಂದು ಕಡೆ ಸರ್ಕಾರಕ್ಕೆ, ಮತ್ತೊಂದು ಕಡೆ ಮಕ್ಕಳಿಗೆ ವಂಚಿಸಿದ್ದ ವ್ಯಕ್ತಿಗೆ ಶಿಕ್ಷೆಯಾಗಿರುವುದು ಸಂತಸ ತಂದಿದ್ದು ನಮ್ಮ ಹೋರಾಟಕ್ಕೆ ಜಯ ಲಭಿಸಿದೆ. ಶಿಕ್ಷಣ ಇಲಾಖೆ ಈ ಹಿಂದಿನ ಡಿಡಿಪಿಐ ಮತ್ತು ಈಗಿನ ಡಿಡಿಪಿಐ ಪಾಂಡು ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ನನ್ನ ವಂದನೆಗಳು.
ಇಂಟೆಕ್ ರಾಜು, ಸಾಮಾಜಿಕ ಕಾರ್ಯಕರ್ತ, ಹುಣಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net