

ಚಂಡೀಗಢ: ಪಂಜಾಬ್ನ ಮೂರುಜಿಲ್ಲೆಗಳಲ್ಲಿ ಕಳಪೆ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಈ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿರುವುದಾಗಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.
ಅಮೃತಸರ, ಬಟಾಲಾ ಸೇರಿ ಹಲವು ಜಿಲ್ಲೆಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಜುಲೈ 29ರಂದು ಅಮೃತಸರ ಜಿಲ್ಲೆಯ ಮುಚ್ಚಲ್ ಮತ್ತು ತಂಗ್ರಾ ಹಳ್ಳಿಗಳಲ್ಲಿ ಐದು ಸಾವು ವರದಿಯಾಗಿತ್ತು. ಶುಕ್ರವಾರ ಬಟಾಲಾದಲ್ಲಿ ಐವರು, ತರ್ನ್ ತರನ್ ಜಿಲ್ಲೆಯಲ್ಲಿ ಆರು ಜನರು ಮೃತರಾಗಿದ್ದಾರೆ. ಮೂರು ಜಿಲ್ಲೆಗಳಿಂದ ಒಟ್ಟು ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಮುಚ್ಚಲ್ ಗ್ರಾಮಸ್ಥ ಬಲ್ವಿಂದರ್ ಕೌರ್ ಎಂಬಾತನನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಮರೇಂದರ್ ಸಿಂಗ್ ಹೇಳಿದ್ದಾರೆ. ಜಲಂಧರ್ ವಿಭಾಗದ ಕಮಿಷನರ್ಗೆ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…
ಪ್ರತಿವರ್ಷ ನೂರಾರು ಸಾವು: ವಿಷಪೂರಿತ ಮದ್ಯ ಸೇವನೆ ಭಾರತಕ್ಕೆ ಹಲವು ವರ್ಷಗಳ ಸಮಸ್ಯೆಯಾಗಿದೆ. ಮನೆಗಳಲ್ಲೇ ತಯಾರಿಸಲ್ಪಡುವ ಈ ಮದ್ಯವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪ್ರತಿ ವರ್ಷ ನೂರಾರು ಜನರು ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿ 9ರಂದು ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಲ್ಲಿ 100 ಮಂದಿ ಬಲಿಯಾಗಿದ್ದರು. ಅದೇ ತಿಂಗಳ 24ನೇ ತಾರೀಖಿನಂದು ಅಸ್ಸಾಂನಲ್ಲಿ 99 ಮಂದಿ ವಿಷಪೂರಿತ ಮದ್ಯ ಕುಡಿದು ಸಾವನ್ನಪ್ಪಿದ್ದರು. 2017ರ ಜುಲೈನಲ್ಲಿ ಉತ್ತರ ಪ್ರದೇಶದಲ್ಲಿ 21 ಮಂದಿ ಸಾವಿಗೀಡಾಗಿದ್ದರು.
ಮದ್ಯಪಾನ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ವಿಷಮದ್ಯ ಸೇವಿಸಿ 2016ರ ಆಗಸ್ಟ್ನಲ್ಲಿ 13 ಮಂದಿ ಸಾವನ್ನಪ್ಪಿದ್ದರು. 2015ರಲ್ಲಿ ಮುಂಬೈನ ಕೊಳೆಗೇರಿಯೊಂದರಲ್ಲೇ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. 2008ರಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 170ಕ್ಕೂ ಹೆಚ್ಚು ಜನರು ಅಸುನೀಗಿದ್ದರು. (ಏಜೆನ್ಸೀಸ್)