ಸ್ಮಾರ್ಟ್​ಫೋನ್ ಕಳವು ಮಾಡಿ, ಪ್ರೀ ಅಪ್ರೂವ್ಡ್​ ಸಾಲವನ್ನೂ ಪಡೆದ್ರು ಕಿರಾತಕರು!

Smart Phone
Published on

ಮಾಸ್ಕೋ: ಆತ ರಷ್ಯನ್ ಪ್ರಜೆ. ಹೆಸರು ವ್ಲಾದಿಮಿರ್ ವೊಲೊಖೋವಿಚ್​. ಮಾಸ್ಕೋದ ನಿವಾಸಿ. ಅಸಹಜ ಕಾರಣಕ್ಕೆ ದೇಶದ ಗಮನಸೆಳೆದ ವ್ಯಕ್ತಿ. ವೊಲೊಖೋವಿಚ್​ ಕೂಡ ಸ್ಮಾರ್ಟ್​ಫೋನ್ ಕಳೆದುಕೊಂಡವರು. ಯಾರೋ ಕಳ್ಳರು ಅವರ ಫೋನನ್ನು ಎಗರಿಸಿದ್ದರು. ಈ ಕಳವು ಪ್ರಕರಣ ವೊಲೊಖೋವಿಚ್​​ಗೆ ಡಬಲ್ ಶಾಕ್​ ನೀಡಿದೆ!

ಸ್ಮಾರ್ಟ್​ಫೋನ್ ಎಗರಿಸಿದ ಕಳ್ಳರು ಮಾಡಿದ್ದೇನು ಗೊತ್ತೆ? ಸ್ಮಾರ್ಟ್​ಫೋನ್ ಬಳಸಿಕೊಂಡು ಆಲ್ಫಾ ಬ್ಯಾಂಕಿನಿಂದ ಪ್ರೀ ಅಪ್ರೂವ್ಡ್​ ಸಾಲ ಪಡೆದುಕೊಂಡರು. ಸಾಲದ ಖಾತೆ ವೊಲೊಖೋವಿಚ್​ ಹೆಸರಿನಲ್ಲಿ! ವೊಲೊಖೋವಿಚ್​ ಯಾವತ್ತೂ ಸಾಲಕ್ಕೆ ಅರ್ಜಿ ಸಲ್ಲಿಸಿದವರಲ್ಲ. ಆದರೂ ಅವರ ಸಾಲದ ಖಾತೆ ತೆರೆದುಕೊಂಡು ಅಲ್ಲಿ ದಿನೇದಿನೆ ಬಡ್ಡಿ ಬೆಳೆಯುತ್ತ ಸಾಗಿತ್ತು. ಅದು ಸುಸ್ಥಿ ಸಾಲವಾದಾಗ ಬ್ಯಾಂಕ್ ವೊಲೊಖೋವಿಚ್ ಅವರನ್ನು ಸಂಪರ್ಕಿಸಿ ಐದು ವರ್ಷದಲ್ಲಿ 20 ಸಾವಿರ ಡಾಲರ್​ ಮರುಪಾವತಿಸುವಂತೆ ನೋಟಿಸ್ ನೀಡಿತು. ಸಾಲವೇ ತೆಗೆದುಕೊಳ್ಳದವನಿಗೆ 20,000 ಡಾಲರ್​ ಸಾಲ ಮರುಪಾವತಿ ನೋಟಿಸ್ ನೋಡಿ ಎದೆ ಧಸಕ್ಕೆಂದಿತು. ಅಷ್ಟೇ ಅಲ್ಲ, ಈ ವಂಚನೆಯ ವಿವರ ಬಹಿರಂಗಗೊಳಿಸುವುದಕ್ಕೆ ಸಾರ್ವಜನಿಕ ವೇದಿಕೆಯನ್ನೇರಿದರು.

ವೊಲೊಖೋವಿಚ್​ ತಮ್ಮ ವ್ಯಥೆಯನ್ನು ತೋಡಿಕೊಂಡದ್ದು ಹೀಗೆ- ಆಲ್ಫಾ ಬ್ಯಾಂಕ್​ನವರು 20,000 ಡಾಲರ್ ಮರುಪಾವತಿಸಬೇಕು ಎಂದು ತಿಳಿಸಿದಾಗ, ಸಾಲ ತೆಗೆದುಕೊಂಡವರು ಯಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾದೆ. ಸ್ಮಾರ್ಟ್​​ಫೋನ್ ಕಳೆದುಕೊಂಡಾಗ ಅದರಲ್ಲಿ ಆಲ್ಫಾ ಬ್ಯಾಂಕಿನ ಆ್ಯಪ್​ ಚಾಲ್ತಿಯಲ್ಲಿತ್ತು. ಅದರಲ್ಲಿ ಪ್ರೀ ಅಪ್ರೂವ್ಡ್​ ಸಾಲದ ವ್ಯವಸ್ಥೆಯನ್ನು ವಂಚಕರು ಬಳಸಿಕೊಂಡಿದ್ದರು. ಸರಳ ಇಲೆಕ್ಟ್ರಾನಿಕ್ ಸಿಗ್ನೇಚರ್​ ಬಳಸಿಕೊಂಡು ಯಾವುದೇ ಆಧಾರವಿಲ್ಲದೆ ಬ್ಯಾಂಕ್ ಸಾಲ ನೀಡುವ ವ್ಯವಸ್ಥೆ ಇದು. ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಸಾಲದ ಖಾತೆ ಮುಚ್ಚುವಂತೆ ಸೂಚಿಸಿದ ಬಳಿಕ ಅವರು ವಂಚಕರ ಖಾತೆಯಿಂದ 1,900 ಡಾಲರ್ ಹಿಂಪಡೆಯುವಲ್ಲಿ ಯಶ ಕಂಡಿದ್ದಾರೆ. ಆದರೆ, ಉಳಿದ ಹಣವನ್ನು ಮರುಪಾವತಿಸುವಂತೆ ನನಗೆ ದಂಬಾಲು ಬಿದ್ದಿದ್ದಾರೆ. ಸ್ಮಾರ್ಟ್​ಫೋನ್​ ಕಳುವಾದ ತಕ್ಷಣ ಮಾಹಿತಿ ನೀಡಬೇಕಾಗಿತ್ತು ಎಂಬುದು ಬ್ಯಾಂಕ್​ನವರ ವಾದ. ನನ್ನ ಬಳಿ 24 ಗಂಟೆ ಫೋನ್​ ಇರಲಿಲ್ಲ. ಆ್ಯಪ್​ಗಳನ್ನು ಬ್ಲಾಕ್​ ಮಾಡುವುದು ಸಾಧ್ಯವಾಗಲಿಲ್ಲ. ಆಗ ಈ ಪ್ರೀ ಅಪ್ರೂವ್ಡ್​ ಸಾಲದ ವಿಚಾರ ಗಮನಕ್ಕೆ ಬಂದಿರಲಿಲ್ಲ.

ಆದಾಗ್ಯೂ, ನನ್ನ ಫೋನ್ ಪತ್ತೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೆ. ಕೊನೆಗೆ ನನ್ನ ಸಹೋದ್ಯೋಗಿಯೊಬ್ಬರ ನೆರವಿನೊಂದಿಗೆ ನನ್ನ ಫೋನ್ ಪತ್ತೆ ಹಚ್ಚಿದೆ. ಮಾರನೇ ದಿನ ಯಾರೋ ಬಳಿ ಫೋನ್ ಸಿಕ್ಕಿತ್ತು. ಅಲ್ಲಿ ಹೋಗಿ ಅವರಿಂದ ಅದನ್ನು ಪಡೆದು ತಂದೆ. ಆದರೆ ಅಷ್ಟರಲ್ಲಾಗಲೇ ವಂಚಕರು ಸಾಲ ಪಡೆದು ಬೇರೆ ರೀತಿಯ ವಂಚನೆ ಎಸಗಿದ್ದರು!

ನನ್ನ ಪ್ರಶ್ನೆ ಇಷ್ಟೇ- ನನ್ನ ಅನುಮತಿ ಇಲ್ಲದೇ ಯಾವುದೋ ಸಿಂಪಲ್ ಆಗಿರುವ ಎಸ್​ಎಂಎಸ್ ಕೋಡ್ ಮೂಲಕ ಸಾಲವನ್ನು ನನ್ನ ಹೆಸರಿನಲ್ಲಿ ಇನ್ಯಾರಿಗೋ ವಿತರಿಸುತ್ತಾರೆ ಎಂದರೆ ಅದು ಬ್ಯಾಂಕಿಂಗ್ ವ್ಯವಸ್ಥೆಯ ಲೋಪ. ಅದನ್ನು ಸರಿಪಡಿಸಿಕೊಳ್ಳಬೇಕು. ನಾನು ತೆಗೆದುಕೊಳ್ಳದೇ ಇರುವ ಸಾಲವನ್ನು ನಾನೇಕೆ ಮರುಪಾವತಿಸಲಿ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕರಣವೀಗ ಕೋರ್ಟ್​ ಮೆಟ್ಟಿಲೇರಿದ್ದು ಕುತೂಹಲ ಕೆರಳಿಸಿದೆ. ಸುಲಭವಾಗಿ ಸಾಲ ವಿತರಣೆಯ ವ್ಯವಸ್ಥೆಯನ್ನು ವಂಚಕರು ಬಳಸಿಕೊಳ್ಳುತ್ತಿರುವುದು ಈಗ ಹಣಕಾಸು ಕ್ಷೇತ್ರ ಮತ್ತು ಗ್ರಾಹಕರ ಮಟ್ಟಿಗೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net