ಅಕ್ರಮವಾಗಿ ನಿರ್ಮಿಸುತ್ತಿದ್ದ ಮನೆ ತೆರವು

sor
ಸೊರಬ ತಾಲೂಕಿನ ಅಗಸನಹಳ್ಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಮನೆಯನ್ನು ತೆರವುಗೊಳಿಸಿರುವುದು.
Published on

ಸೊರಬ: ತಾಲೂಕಿನ ಅಗಸನಹಳ್ಳಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಮನೆಯನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಆನವಟ್ಟಿ ಹೋಬಳಿಯ ಅಗಸನಹಳ್ಳಿ ಸರ್ವೇ ನಂ.20ರ ತಿರುಮಲ ದೇವರ ಗುಡ್ದದ ಸರ್ಕಾರಿ ಭೂಮಿಯಲ್ಲಿ ಗ್ರಾಮದ ವ್ಯಕ್ತಿಯೋರ್ವ ಆರ್‌ಸಿಸಿ ಮನೆ ಕಟ್ಟುತ್ತಿದ್ದರು. ಗ್ರಾಮಸ್ಥರು ಮನೆಯನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ದೂರು ನೀಡಿದ್ದರು.

ತಾಲೂಕು ಭೂಮಾಪಕರ ವರದಿಯಂತೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದು ನಕ್ಷೆಯಲ್ಲಿ ತಿಳಿದು ಬಂದಿದ್ದರಿಂದ ತಹಸೀಲ್ದಾರ್ ಮಂಜುಳಾ ಹೆಗಡಾಳ್ ನೇತೃತ್ವದಲ್ಲಿ ಮನೆಯನ್ನು ತೆರವುಗೊಳಿಸಲಾಗಿದೆ.

ಆಗಸನಹಳ್ಳಿ ಗ್ರಾಪಂ ವ್ಯಾಪ್ತಿಯ ತಿರುಮಲ ಗುಡ್ಡ 7.31 ಎಕರೆ ಇದ್ದು. ಇದರಲ್ಲಿ 28 ಗುಂಟೆಯನ್ನು ಆಶ್ರಯ ನಿವೇಶನಕ್ಕಾಗಿ ಗುರುತಿಸಲಾಗಿದೆ. ಆದರೆ ಗ್ರಾಪಂನಿಂದ ನಿವೇಶನ ಹಂಚಿಕೆಯಾಗಿಲ್ಲ. ಈ ನಡುವೆ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಮುಂದಾಗಿರುವ ವ್ಯಕ್ತಿಯ ಅಜ್ಜನ ಹೆಸರಿಗೆ 1991-92ರಲ್ಲಿ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಆದರೆ ಈ ಹಕ್ಕುಪತ್ರ ಗ್ರಾಪಂನಲ್ಲಿ ಖಾತೆಯಾಗಿಲ್ಲ. ನಿವೇಶನದ ಚಕ್ಕುಬಂದಿಯೂ ನಮೂದಾಗಿಲ್ಲ. ಮನೆ ಕಟ್ಟುವಾಗ ಗ್ರಾಪಂನಿಂದ ಅಥವಾ ಕಂದಾಯ ಇಲಾಖೆಯಿಂದ ಪರವಾನಗಿ ಪಡೆದಿಲ್ಲ. ಆದರೂ ಮನೆ ನಿರ್ಮಾಣ ಮಾಡುತ್ತಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಕಂದಾಯ ಇಲಾಖೆ ಮನೆ ತೆರವುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net