ಅಂಗವಿಕಲನ ನಿವೇಶನ ಅಕ್ರಮ ಮಾರಾಟ

sgr protest (4)
ಸಾಗರದ ಅಂಗವಿಕಲ ಕಾಂತರಾಜು ಅವರ ನಿವೇಶನ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿ ಡಿಎಸ್‌ಎಸ್ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರವಿಕುಮಾರ್, ಜಗನ್ನಾಥ್, ಸುರೇಶ್, ಜಾನ್ಸನ್ ಲೋಬೋ, ಶಿವಮೂರ್ತಿ, ಉಮಾ, ಪ್ರಶಾಂತ್ ಇತರರಿದ್ದರು.
Published on

ಸಾಗರ: ಅಂಗವಿಕಲ ಕಾಂತರಾಜು ಅವರಿಗೆ ಮಂಜೂರಾಗಿದ್ದ ಆಶ್ರಯ ನಿವೇಶನವನ್ನು ಬೇರೆಯವರು ಅಕ್ರಮವಾಗಿ ಮಾರಾಟ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಓಡಾಡಲು ಸಾಧ್ಯವಾಗದ ಕಾಂತರಾಜು ಟ್ರೈಸಿಕಲ್‌ನಲ್ಲಿ ಓಡಾಡುತ್ತ, ಜೀವನೋಪಾಯಕ್ಕಾಗಿ ಗೂಡಂಗಡಿ ನಡೆಸುತ್ತಾರೆ. ತಂದೆ ಕ್ಯಾನ್ಸರ್‌ನಿಂದ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೈಕೆ ಮಾಡಿಕೊಂಡಿರುವ ಕಾಂತರಾಜುಗೆ ಮಂಜೂರಾಗಿದ್ದ ಆಶ್ರಯ ನಿವೇಶನವನ್ನು ಭೂಮಾಫಿಯಾದವರು ನಗರಸಭೆ ಅಧಿಕಾರಿಗಳ ಶಾಮೀಲಾಗಿ ಲಪಟಾಯಿಸಿದ್ದಾರೆ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ರೇವಪ್ಪ ಕೆ. ಹೊಸಕೊಪ್ಪ ದೂರಿದರು.

ಜಿಲ್ಲಾ ಸಂಘಟನಾ ಸಂಚಾಲಕ ಗಣಪತಿ ವಡ್ನಾಲ ಮಾತನಾಡಿ, ಕಾಂತರಾಜು ಸ್ಥಿತಿ ನೋಡಿ ಕಾಗೋಡು ತಿಮ್ಮಪ್ಪ ಸಚಿವರಾಗಿದ್ದಾಗ ಆಶ್ರಯ ನಿವೇಶನ ಮಂಜೂರು ಮಾಡಿದ್ದರು. ಕಾಂತರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರಿಂದ ಖಾಲಿಪತ್ರಕ್ಕೆ ಸಹಿ ಮಾಡಿಸಿಕೊಂಡು ನಿವೇಶನ ಗೋಲ್‌ಮಾಲ್ ಮಾಡಲಾಗಿದೆ. ತಕ್ಷಣ ಕಾಂತರಾಜು ಅವರ ಆಶ್ರಯ ನಿವೇಶನ ಮರಳಿ ಕೊಡಿಸಬೇಕು. ಮುಂದಿನ ಎಂಟು ದಿನಗಳಲ್ಲಿ ನಿವೇಶನ ವಾಪಸ್ ಕೊಡಿಸದಿದ್ದರೆ ನಗರಸಭೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂತ್ರಸ್ತ ಕಾಂತರಾಜು ಮಾತನಾಡಿ, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನಿಂದ ಸಹಿ ಮಾಡಿಸಿಕೊಂಡು ನನ್ನ ನಿವೇಶನ ಲಪಟಾಯಿಸುವ ಸಂಚು ರೂಪಿಸಿದ್ದರು. 50 ಸಾವಿರ ರೂ. ಕೊಡುತ್ತೇವೆ ಎಂದು ಅಮಿಷವೊಡ್ಡಿದ್ದರು. ನನಗೆ ಸರ್ಕಾರದಿಂದ ಕೊಟ್ಟ ನಿವೇಶನ ಕೊಡುವುದಿಲ್ಲ ಎಂದು ಹೇಳಿದರೂ ನಕಲಿ ದಾಖಲೆ ಸೃಷ್ಟಿಸಿ ನನ್ನ ನಿವೇಶನ ಲಪಟಾಯಿಸಿದ್ದಾರೆ. ಫೋರ್ಜರಿ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನನ್ನ ಅಸಹಾಯಕ ಸ್ಥಿತಿಯನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನನ್ನ ನಿವೇಶನ ವಾಪಸ್ ಕೊಡಿಸಲು ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ರವಿಕುಮಾರ್, ಜಗನ್ನಾಥ್ ಭೀಮನೇರಿ, ಸುರೇಶ್ ಶಿರವಾಳ, ಜಾನ್ಸನ್ ಲೋಬೋ, ಶಿವಮೂರ್ತಿ, ಉಮಾ, ಪ್ರಶಾಂತ್, ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net