

ರಾಮನಗರ : ಆರೋಗ್ಯವೇ ಜನರ ದೊಡ್ಡ ಆಸ್ತಿ. ಆರೋಗ್ಯವಂತ ಗ್ರಾಮ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಕೆಲಸದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ವಿಶ್ವ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮೀಕ್ಷೆಯ ಪ್ರಕಾರ ನಾಲ್ಕು ಜನರಲ್ಲಿ ಒಬ್ಬರಿಗೆ ಕ್ಷಯ ರೋಗವಿರುತ್ತದೆ ಎನ್ನುತ್ತಾರೆ. ಇದನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಎಂದರು.
ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ತಮ್ಮ ಗ್ರಾಮದಲ್ಲಿ ಕ್ಷಯ ರೋಗ ಲಕ್ಷಣವುಳ್ಳವರು ಕಂಡುಬಂದಲ್ಲಿ ಅವರಿಗೆ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿ, ಕ್ಷಯಮುಕ್ತ ಗ್ರಾಮ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಗ್ರಾಪಂ ಸದಸ್ಯರಿಗೆ ತರಬೇತಿಗೆ ಚಿಂತನೆ: ಗ್ರಾಪಂ ಪ್ರತಿನಿಧಿಗಳು ಕೇವಲ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಒದಗಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಿವೆ. ಅವುಗಳ ಬಗ್ಗೆಯೂ ಗಮನ ಹರಿಸಿ. ಆರೋಗ್ಯ ಇಲಾಖೆಯಲ್ಲಿ ಬಹಳಷ್ಟು ಕಾಯಿಲೆಗಳಿಗೆ ಉಚಿತ, ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವ ಯೋಜನೆಗಳಿವೆ. ಅವುಗಳ ಬಗ್ಗೆ ತಿಳಿದುಕೊಂಡು ಗ್ರಾಮೀಣ ಜನರಿಗೆ ಮಾಹಿತಿ ನೀಡಿ. ಏಪ್ರಿಲ್ ತಿಂಗಳಲ್ಲಿ ಗ್ರಾಪಂ ಸದಸ್ಯರಿಗೆ ಸರ್ಕಾರದಿಂದ ದೊರೆಯಲಿರುವ ಸೌಲಭ್ಯಗಳ ಬಗ್ಗೆ ತರಬೇತಿ ನೀಡಲು ಚಿಂತಿಸಲಾಗುತ್ತಿದೆ ಎಂದು ಇಕ್ರಂ ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಕ್ಷಯ ರೋಗವು ಮನುಷ್ಯನ ಕೂದಲು ಮತ್ತು ಉಗುರು ಬಿಟ್ಟು ದೇಹದ ಯಾವ ಭಾಗದಲ್ಲೂ ಬೇಕಾದರೂ ಉಂಟಾಗಬಹುದು. ಶ್ವಾಸಕೋಶಕ್ಕೆ ಉಂಟಾಗುವ ಕ್ಷಯ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ರೋಗಿ ಕೆಮ್ಮಿದಾಗ, ಸೀನಿದಾಗ ಹೊರಬರುವ ತುಂತುರುಗಳಿಂದ ರೋಗಾಣು ಆರೋಗ್ಯವಂತ ವ್ಯಕ್ತಿಯ ದೇಹ ಸೇರುತ್ತದೆ. ರೋಗಾಣುಗಳು 45 ನಿಮಿಷದವರೆಗೆ ಜೀವಂತವಾಗಿರುತ್ತವೆ. ಜನರು ತಮಗೆ ಕ್ಯಾನ್ಸರ್ ಇದ್ದರೆ ಮರೆಮಾಚುವುದಿಲ್ಲ. ಕ್ಷಯ ರೋಗವಿದ್ದರೆ ವೈದ್ಯರ ಬಳಿ ಹೇಳಲು ಹಿಂಜರಿಯುತ್ತಾರೆ. ಕ್ಷಯ ರೋಗಕ್ಕೆ ಚಿಕಿತ್ಸೆ ಇದ್ದು, ಗುಣವಾಗುತ್ತದೆ ಎಂದರು.
ರಾಮನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ. ಜಗದೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಸುವನ್ನು ಸಾಕುತ್ತೇವೆ, ತರಕಾರಿ, ಸೊಪ್ಪು ಹಾಗೂ ತೆಂಗನ್ನು ಬೆಳೆಯುತ್ತೇವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕ ಆಹಾರಗಳಾದ ಹಾಲು, ಎಳೆನೀರು, ತರಕಾರಿಗಳನ್ನು ಮಾರಾಟ ಮಾಡುತ್ತೇವೆ. ಆದರೆ, ಸೇವಿಸಲು ಹಿಂದೇಟು ಹಾಕುತ್ತೇವೆ ಎಂದರು.
ಜಿಪಂ ಉಪಕಾರ್ಯದರ್ಶಿ ಉಮೇಶ್, ಆರ್‌ಸಿಎಚ್ ಅಧಿಕಾರಿ ಡಾ. ಪದ್ಮ, ಡಿಎಸ್‌ಒ ಡಾ.ಕಿರಣ್ ಶಂಕರ್, ಡಿಎಲ್‌ಒ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲೆ ಡಾ. ಮಂಜುಳ ಇದ್ದರು.