ಐಐಟಿಯ ಕ್ಯಾಂಪಸ್​ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸಹಾಯಕ ಪ್ರಾಧ್ಯಾಪಕ

Proffessor
Published on

ಲಖನೌ: ಭಾರತದ ಪ್ರಮುಖ ಶಿಕ್ಷಣಸಂಸ್ಥೆಗಳಲ್ಲೊಂದಾದ ಕಾನ್ಪುರ ಐಐಟಿಯ ಸಹಾಯಕ ಪ್ರಾಧ್ಯಾಪಕರೋರ್ವರು ಕ್ಯಾಂಪಸ್​​ನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ವಿಭಾಗದ ಅಸಿಸ್ಟೆಂಟ್​ ಪ್ರೊಫೆಸರ್​ ಆಗಿದ್ದ ಪ್ರಮೋದ್​ ಸುಬ್ರಹ್ಮಣ್ಯನ್​ (35) ಮೃತರು. ಇವರು ಬುಧವಾರ ರಾತ್ರಿ ಕ್ಯಾಂಪಸ್​ನಲ್ಲಿರುವ ಒಂದು ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕಾಗಮಿಸಿದ ಕಲ್ಯಾಣಪುರ ಪೊಲೀಸರು ಪ್ರಾಧ್ಯಾಪಕನ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ.

ಸ್ಥಳದಲ್ಲಿ ಯಾವುದೇ ಡೆತ್​ ನೋಟ್​ ಸಿಕ್ಕಿಲ್ಲ. ಪ್ರಮೋದ್​ ಸುಬ್ರಹ್ಮಣ್ಯ ಅವರು ನೈಲಾನ್​ ಹಗ್ಗ ಬಳಸಿ ನೇಣು ಹಾಕಿಕೊಂಡಿದ್ದಾರೆ. ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಲ್ಯಾಣಪುರ ಪೊಲೀಸ್ ಅಧಿಕಾರಿ ಅಶ್ವಿನಿ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆ; ತನಿಖೆ ಮೊದಲ ಹಂತದಲ್ಲಿ 8 ಮಂದಿ ಬಂಧನ

ಕೊವಿಡ್​-19 ನಿಂದಾಗಿ ಕಾನ್ಪುರ ಐಐಟಿಗೆ ಯಾವುದೇ ವಿದ್ಯಾರ್ಥಿಗಳೂ ಬರುತ್ತಿರಲಿಲ್ಲ. ಕೆಲವೇ ವಿದ್ಯಾರ್ಥಿಗಳು, ಅಧ್ಯಾಪಕರು ಅದೇ ಕ್ಯಾಂಪಸ್​ನಲ್ಲಿ ಉಳಿದುಕೊಂಡಿದ್ದಾರೆ.

ಅಸಿಸ್ಟಂಟ್​ ಪ್ರೊಫೆಸರ್​ ಪ್ರಮೋದ್​ ಸುಬ್ರಹ್ಮಣ್ಯ ಸಾವಿಗೆ ಐಐಟಿಯ ನಿರ್ದೇಶಕ ಪ್ರೊ.ಅಭಯ್​ ಕರಂಡಿಕರ್​ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಂಪ್ಯೂಟರ್​ ಕ್ಷೇತ್ರದಲ್ಲಿ ಅಪಾರ ಬುದ್ಧಿವಂತರಾಗಿದ್ದ ಪ್ರಮೋದ್​ ಅವರನ್ನು ಕಳೆದುಕೊಂಡಿದ್ದು ಬಹುದೊಡ್ಡ ನಷ್ಟ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net