

ಸಾಗರ: ಕಲೆಯಲ್ಲಿ ನಿರಂತರತೆ ಮತ್ತು ಸಂಘಟನೆ ಸುಲಭದ ಮಾತಲ್ಲ. ಹಲವು ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕಾಗುತ್ತದೆ ಎಂದು ನಗರಸಭೆ ಸದಸ್ಯ ಕೆ.ಆರ್.ಗಣೇಶ್‌ಪ್ರಸಾದ್ ಹೇಳಿದರು.
ಸಾಗರದಲ್ಲಿ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಇವರಿಂದ ಆಯೋಜಿಸಿದ್ದ ತಾಳಮದ್ದಲೆ ಸಮಾರೋಪ ಹಾಗೂ ಕಲಾಭಿವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರವಾಹದ ಜತೆಗೆ ತೇಲಿ ಹೋಗಲು ಪ್ರಯಾಸಪಡಬೇಕಿಲ್ಲ. ಆದರೆ ವಿರುದ್ಧವಾಗಿ ಈಜಿ ಯಶಸ್ಸು ಕಂಡರೆ ಮಾತ್ರ ಸಾಧನೆ. ಹಾಗೆಯೇ ಟೀಕೆ, ಟಿಪ್ಪಣಿ ಎಲ್ಲವನ್ನೂ ಮೀರಿ ಸಂಘಟನೆಗೆ ಮಾತ್ರ ಆದ್ಯತೆ ಕೊಟ್ಟು ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುತ್ತಿರಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಸ್.ಮೋಹನ್ ಮಾತನಾಡಿ, ಪ್ರಚಲಿತವಲ್ಲದ ಪೌರಾಣಿಕ ಕಥೆಯೊಳಗಿರುವ ಸಣ್ಣ ಸಣ್ಣ ವಿಷಯಗಳನ್ನು ಪ್ರಸಂಗವಾಗಿಸಿ ನಿಶ್ಚಿತ ಸಮಯ ಮಿತಿಯೊಳಗೆ ಪ್ರೇಕ್ಷಕರಿಗೆ ಉಣಬಡಿಸುವ ತಾಳಮದ್ದಲೆ ಅನುಕರಣೀಯ ಮಾದರಿ. ಈ ಮಾದರಿ ಇಟ್ಟುಕೊಂಡರೆ ಯಕ್ಷಗಾನದ ಬೆಳವಣಿಗೆಗೂ ಪೂರಕ ಎಂದು ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶಪ್ಪ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ವಂಶವಾಹಿನಿ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ ಇತರರಿದ್ದರು. ರಮೇಶ್ ಹೆಗಡೆ ಗುಂಡೂಮನೆ ರಚಿತ ಗೋಮಹಿಮೆ ಪ್ರಸಂಗದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಸೂರ್ಯನಾರಾಯಣ, ಸುಜನ್ ಗಣೇಶ್ ಹೆಗಡೆ, ಮಂಜುನಾಥ್, ಶ್ರೀವತ್ಸ ಹಾಗೂ ಮುಮ್ಮೇಳದಲ್ಲಿ ಅರುಣ್, ರವಿಶಂಕರ ಭಟ್, ಅಶೋಕಕುಮಾರ್ ಹೆಗಡೆ, ಪ್ರತೀಕ್ ಇದ್ದರು.