ಕೆಮ್ಮು ಹೆಚ್ಚಿದರೆ ಟಿಬಿ ಟೆಸ್ಟ್: ಚಿಕಿತ್ಸೆಗೆ ಪರಿಷ್ಕೃತ ಮಾರ್ಗಸೂಚಿ; ಪರೀಕ್ಷೆ ಹೆಚ್ಚಳಕ್ಕೆ ಸೂಚನೆ

Nation 2
ಸರ್ಕಾರ ಟೆಸ್ಟ್ ಹೆಚ್ಚಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ದೆಹಲಿಯ ದರ್ಯಾಗಂಜ್​ನಲ್ಲಿ ಸ್ಯಾಂಪಲ್ ಸಂಗ್ರಹಿಸಿದ ಸಿಬ್ಬಂದಿ.
Published on

ನವದೆಹಲಿ: ಕೋವಿಡ್ ಸೋಂಕಿನ ಚಿಕಿತ್ಸೆಗೆ ಕೇಂದ್ರ ಸರ್ಕಾರ ಮಂಗಳವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಕರೊನಾ ವ್ಯಾಧಿಯ ಸೌಮ್ಯ, ಮಧ್ಯಮ ಹಾಗೂ ತೀವ್ರ ಲಕ್ಷಣಗಳಿಗೆ ನೀಡಬೇಕಾದ ಚಿಕಿತ್ಸೆಯನ್ನು ಅದು ನಮೂದಿಸಿದೆ. ಕೆಮ್ಮು ಎರಡು, ಮೂರು ವಾರವಾದರೂ ಕಡಿಮೆ ಆಗದಿದ್ದರೆ ಕ್ಷಯದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಕೇಂದ್ರ ಸರ್ಕಾರ ಸಲಹೆ ಮಾಡಿದೆ. ಕರೊನಾ ರೋಗಿಗಳಿಗೆ ಸ್ಟಿರಾಯಿಡ್ ಮಾತ್ರೆಗಳನ್ನು ಕೊಡುವುದನ್ನು ವೈದ್ಯರು ನಿಲ್ಲಿಸಬೇಕು ಎಂದು ಅದು ಸೂಚಿಸಿದೆ. ಸ್ಟಿರಾಯಿಡ್​ಗಳ ಅಧಿಕ ಬಳಕೆಯಿಂದ ‘ಬ್ಲಾ್ಯಕ್ ಫಂಗಸ್’ ಎಂದು ಹೇಳಲಾಗುವ ಮ್ಯುಕೋರ್​ವೆುೖಕೋಸಿಸ್​ನ ಎರಡನೇ ಸೋಂಕು ತಗಲುವ ಅಪಾಯವಿದೆ ಎಂದು ಮಾರ್ಗಸೂಚಿ ಹೇಳಿದೆ.

ಕೆನಡಾದ ಪಾರ್ಸಲ್ ಮೂಲಕ ಒಮಿಕ್ರಾನ್ ಚೀನಾ ಪ್ರವೇಶ?: ಕರೊನಾ ವೈರಸ್​ನ ಒಮಿಕ್ರಾನ್ ರೂಪಾಂತರಿ ತಮ್ಮ ದೇಶಕ್ಕೆ ಕೆನಡಾದ ಪಾರ್ಸಲ್ ಮೂಲಕ ಪ್ರವೇಶಿಸಿರಬಹುದೆಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಚಳಿಗಾಲದ ಒಲಿಂಪಿಕ್ಸ್ ನಡೆಸಲು ಸಜ್ಜಾಗುತ್ತಿರುವ ಚೀನಾದ ಅಧಿಕಾರಿಗಳು ಸೋಂಕು ಹರಡುವುದನ್ನು ತಡೆಯಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಿಶೇಷವಾಗಿ ವಿದೇಶಗಳಿಂದ ಬರುವ ಅಂಚೆಗಳನ್ನು ತೆರೆಯುವಾಗ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ವಿದೇಶಗಳಿಂದ ಅಂಚೆ ಹಾಗೂ ಪಾರ್ಸಲ್​ಗಳಿಗೆ ಸೋಂಕುತಡೆಕಾರಕಗಳನ್ನು ಸೋಕಿಸಲು ಹಾಗೂ ಅಂಚೆ ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಅಧಿಕಾರಿಗಳು ಸಂಕಲ್ಪ ಮಾಡಿದ್ದಾರೆ. ವಿದೇಶಿ ವಸ್ತುಗಳ ಖರೀದಿ ಅಥವಾ ವಿದೇಶಿ ಅಂಚೆ ಪಡೆಯುವುದನ್ನು ಕಡಿಮೆ ಮಾಡಿ ಎಂಬ ಸಂದೇಶವನ್ನು ಸರ್ಕಾರಿ ವಾಹಿನಿ ಸಿಸಿಟಿವಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಲಸಿಕೆ ಪಡೆಯದವರಲ್ಲಿ ಹೆಚ್ಚಿದ ಸಾವು: ಮಹಾರಾಷ್ಟ್ರದಲ್ಲಿ ಕಳೆದ ಡಿ.1ರ ನಂತರ ಮೃತಪಟ್ಟ ಕರೊನಾ ರೋಗಿಗಳಲ್ಲಿ ಶೇಕಡ 68ರಷ್ಟು ಜನರು ಕೋವಿಡ್ ವ್ಯಾಕ್ಸಿನ್ ಪಡೆದಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಔಷಧ ಇಲಾಖೆಯ ವರದಿಯೊಂದು ಹೇಳಿದೆ. ಉಳಿದ ಶೇಕಡ 32 ಮಂದಿ ಪೂರ್ಣವಾಗಿ ಲಸಿಕೆ ಪಡೆದವರು, ಇತರ ಆರೋಗ್ಯ ಸಮಸ್ಯೆ ಇರುವವರು ಅಥವಾ ಇಲ್ಲದವರು ಎಂದು ಅಧ್ಯಯನ ವರದಿ ತಿಳಿಸಿದೆ.

ಟೆಸ್ಟ್ ತ್ವರಿತಗೊಳಿಸಲು ಪತ್ರ: ದೇಶದಲ್ಲಿ ಕರೊನಾವೈರಸ್ ತಪಾಸಣೆ ಪರೀಕ್ಷೆ ಗಣನೀಯವಾಗಿ ಕುಸಿದಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಪರೀಕ್ಷೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಮಾಡಿದೆ. ಕೇವಲ ಒಂದು ವಾರದ ಹಿಂದೆಯಷ್ಟೇ ಕೋವಿಡ್ ಟೆಸ್ಟ್ ಅಗತ್ಯವಿಲ್ಲದ ಸನ್ನಿವೇಶಗಳ ವಿವರಣೆಯನ್ನು ವಿಸ್ತರಿಸಿದ್ದ ಸರ್ಕಾರ, ಇದೀಗ ಪರೀಕ್ಷೆಯನ್ನು ತ್ವರಿತಗೊಳಿಸಲು ಕರೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಈ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

10 ದಿನದ ಬಳಿಕ ಸೋಂಕು?: ಕೆಲವು ಕರೊನಾ ರೋಗಿಗಳಲ್ಲಿ 10 ದಿನಗಳ ಕ್ವಾರಂಟೈನ್ ನಂತರವೂ ಸೋಂಕು ಕಾಣಿಸಿಕೊಳ್ಳಬಹುದು. ಹತ್ತು ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿ ಆಗುವ ಸಾಧ್ಯತೆಯಿದೆ ಕ್ವಾರಂಟೈನ್ ನಂತರವೂ ವೈರಸ್ ಸಕ್ರಿಯವಾಗಿರುತ್ತದೆಯೇ ಎನ್ನುವುದನ್ನು ತಿಳಿಯುವ ಹೊಸ ಪರೀಕ್ಷೆಯನ್ನು ಬಳಸಿ ಈ ಅಧ್ಯಯನ ನಡೆಸಲಾಗಿತ್ತು. ‘ಇಂಟರ್​ನ್ಯಾಷನಲ್ ಜರ್ನಲ್ ಆಫ್ ಇನ್​ಫೆಕ್ಷಸ್ ಡಿಸೀಸಸ್’ನಲ್ಲಿ ಈ ಸಂಶೋಧನಾ ವರದಿ ಈಚೆಗೆ ಪ್ರಕಟವಾಗಿದೆ.

ಮಾಸಾಂತ್ಯಕ್ಕೆ ಉತ್ತುಂಗಕ್ಕೆ: ಒಮಿಕ್ರಾನ್ ತಳಿಯಿಂದ ಹೆಚ್ಚುತ್ತಿರುವ ಕರೊನಾ ಸೋಂಕು ದೇಶದಲ್ಲಿ ಜನವರಿ ಅಂತ್ಯದ ಹೊತ್ತಿಗೆ ಉತ್ತುಂಗ ತಲುಪಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ತನ್ನ ವರದಿಯೊಂದರಲ್ಲಿ ಅಭಿಪ್ರಾಯ ಪಟ್ಟಿದೆ. ಮುಂಬೈಯಲ್ಲಿ ದೈನಿಕ 20,971 ಪ್ರಕರಣಗಳೊಂದಿಗೆ ಕರೊನಾದ ಮೂರನೇ ಅಲೆ ಉತ್ತುಂಗಕ್ಕೆ ತಲುಪಿದೆ ಎಂದು ಎಸ್​ಬಿಐನ ಆರ್ಥಿಕ ಸಂಶೋಧನಾ ವಿಭಾಗದ ವರದಿಯಲ್ಲಿ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಕ್ರಾಂತಿ ಘೋಷ್ ಹೇಳಿದ್ದಾರೆ.

ದೇಶದಲ್ಲಿ 2.38 ಲಕ್ಷ ಹೊಸ ಕರೊನಾ ಕೇಸ್: ಭಾರತದಲ್ಲಿ ಮಂಗಳವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 2,38,018 ಹೊಸ ಕೇಸ್​ಗಳು ದೃಢಪಟ್ಟಿವೆ. ಒಟ್ಟು ಸಂಖ್ಯೆ 3,73,80,253ಕ್ಕೆ ಏರಿದೆ. ಈ ಪೈಕಿ ಒಮಿಕ್ರಾನ್ ಪ್ರಭೇದದ ಸಂಖ್ಯೆ 8,891. 24 ತಾಸಿನಲ್ಲಿ 310 ಜನರು ಮೃತಪಟ್ಟಿದ್ದಾರೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 14.43 ಆಗಿದೆ. ಕಳೆದ ಒಂದು ದಿನದಲ್ಲಿ ಸಕ್ರಿಯ ಪ್ರಕರಣಗಳಲ್ಲಿ 80,287 ಕೇಸ್ ಏರಿಕೆಯಾಗಿದ್ದು ಒಟ್ಟು 17,36,628 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಹೊಸ ಪ್ರಕರಣಗಳಲ್ಲಿ ಸೋಮವಾರದ್ದಕ್ಕಿಂತ 20,071 ಕೇಸ್ ಕಡಿಮೆಯಾಗಿದೆ. ಪ್ರತಿಯೊಂದು ಸ್ಯಾಂಪಲ್​ನ ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ಸಾಧ್ಯವಿಲ್ಲ ಎಂದಿರುವ ಸರ್ಕಾರ, ಪ್ರಸ್ತುತ ಅಲೆಗೆ ಒಮಿಕ್ರಾನ್ ರೂಪಾಂತರಿ ಕಾರಣ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net