

ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜುನಾನ್| ಅಹೇತುನÝ—ನ್ಯಾನಪಿ ತಾರಯಂತಃ || ತಾನೂ ಭವಸಾಗರವನ್ನು ದಾಟಿ, ಇತರರೂ ದಾಟುವಂತಾಗಿಸುವವ.
ಹಾಗೆಯೇ ಯೋಗ ವಾಸಿಷ್ಠದಲ್ಲಿ ವಸಿಷ್ಠ ಮುನಿಗಳು ವಿವರಿಸಿದಂತೆ ಗುರುವಿನ ಮಹತ್ತರವಾದ ಜವಾಬ್ದಾರಿಯನ್ನು ವಿವರಿಸುವ ಶ್ಲೋಕವಿದೆ. ಹೀಗೆ ನಾನಾ ರೀತಿಯಲ್ಲಿ ನಿಖರವಾದ, ಸ್ಪಷ್ಟವಾದ ಅರ್ಥವನ್ನು ಅನ್ವೇಷಣೆ ಮಾಡಿದಾಗ ಶಿಷ್ಯನ ಸಂಪೂರ್ಣ ಜವಾಬ್ಧಾರಿಯನ್ನು ಹೊತ್ತು ತನ್ಮೂಲಕ ಭವಸಾಗರವನ್ನು ದಾಟಿಸುವ ಕಾರ್ಯ ಗುರುವಿನದು ಎನ್ನಬಹುದಾಗಿದೆ. ತಾನು ಸ್ವಯಂ ಸಾಧನಾದಿಗಳನ್ನು, ತಪಸ್ಸನ್ನು ಆಚರಿಸುವ ಮತ್ತು ಈ ಪ್ರಪಂಚದ ಆಸೆ ಲಾಲಸೆಗಳಿಂದ ಮುಕ್ತನಾದ ಬ್ರಹ್ಮಜ್ಞ ಪುರುಷನೇ ನಿಜವಾದ ಅರ್ಥದಲ್ಲಿ ಗುರು ಎನ್ನಬಹುದು. ಈ ಆಧುನಿಕ ಪ್ರಪಂಚದಲ್ಲಿ ಗುರು ಎಂದರೆ ಯಾರು? ಎಂಬುದೇ ಒಂದು ಅತ್ಯಂತ ಕ್ಲಿಷ್ಟವಾದ, ಸೂಕ್ಷ್ಮವಾದ ವಿಚಾರವೇ ಸರಿ. ಇದಕ್ಕೆ ನಿಖರವಾದ ಉತ್ತರ ಪಡೆಯಲು ಅಸಾಧ್ಯವಾಗಿದೆ. ಆದರೆ ನಿಜವಾದ ಅರ್ಥದಲ್ಲಿ ಗುರು ಎಂಬ ಅಂಶವನ್ನು ಅರಿತಾಗಲೇ ಗುರು ಪದಕ್ಕೆ ಶ್ರೇಷ್ಠತೆ ಹೆಚ್ಚಾಗುತ್ತಾ ಬರುತ್ತದೆ.
ಧೀಮಂತ, ಬುದ್ಧಿವಂತ ಯುವಕ ತನ್ನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತ ಅಂದಿನ ಅನೇಕಾನೇಕ ಮಹರ್ಷಿ, ಮಹಾನ್ ವಿದ್ವಾಂಸರುಗಳ, ಸಾಧಕರುಗಳ ಬಳಿ ಸಾರಿ ಸ್ವಾಮಿ ತಾವು ದೇವರನ್ನು ಕಂಡಿರುವಿರಾ? ಎಂದು ಪ್ರಶ್ನಿಸಿದಾಗ ನಕಾರಾತ್ಮಕ ಉತ್ತರಗಳೇ ಲಭಿಸುತ್ತಿದ್ದವು. ಅದೊಂದು ದಿನ ಮಹರ್ಷಿ ದೇವೇಂದ್ರನಾಥ ಠಾಗೂರರಲ್ಲಿ ಈ ಯುವಕ ಸ್ವಾಮಿ ತಾವು ದೇವರನ್ನು ಕಂಡಿರುವಿರಾ? ಎಂದು ಪ್ರಶ್ನಿಸಿದಾಗ ಉತ್ತರ ಹೀಗಿತ್ತು. ‘ಮಗೂ ನಾನು ದೇವರನ್ನು ಕಂಡಿಲ್ಲ, ಆದರೆ ನಿನ್ನ ಚಕ್ಷುಗಳನ್ನು ಕಂಡಾಗ ನಿನಗೆ ಭಗವದ್ದರ್ಶನವಾಗುವ ಎಲ್ಲ ಲಕ್ಷಣಗಳಿವೆ’ ಎಂದು ತಿಳಿಸುತ್ತಾರೆ. ತದನಂತರ ಪರಮಗುರು ಸಿದ್ಧಯೋಗಿಯಾಗಿದ್ದ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಬಳಿ ಸಾರಿದ ಆ ಯುವ ಮತ್ತದೇ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಪರಮಹಂಸರು ‘ಮಗೂ ನಾನು ದೇವರನ್ನು ಕಂಡಿದ್ದೇನೆ ಮತ್ತು ನಿನಗೆ ತೋರಿಸಲೂ ಬಲ್ಲೆ!’ ಎನ್ನುತ್ತಾರೆ. ಆ ಯುವಕನೇ ನರೇಂದ್ರನಾಥ. ರಾಮಕೃಷ್ಣರ ಶಕ್ತಿ ಎಂದರೆ ತಮ್ಮ ಬಳಿಗೆ ಸಾರುವ ಪ್ರತಿಯೊಬ್ಬ ಅಧ್ಯಾತ್ಮ ಸಾಧಕನಿಗೂ ಗುರಿ ತಲುಪಿಸುವ ಜವಾಬ್ದಾರಿಯನ್ನು ಹೊಂದುವಂತೆ ಮಾಡಿ, ಅವರವರಿಗೆ ಬೇಕಾಗುವ ಅಧ್ಯಾತ್ಮ ಮಾರ್ಗಸೂಚಿಯನ್ನು ನೀಡುತ್ತಿದ್ದರು. ನರೇಂದ್ರ ಮುಂದೆ ಸ್ವಾತ್ಮಾನುಸಂಧಾನವನ್ನು ಪಡೆದು ಸ್ವಾಮಿ ವಿವೇಕಾನಂದ ಎಂಬ ನಾಮಾಂಕಿತದಿಂದ ಪ್ರಸಿದ್ಧರಾದರು. ಇಲ್ಲಿ ಮತ್ತೊಂದು ಅಂಶವನ್ನು ನಾವು ಗಮನಿಸಬೇಕು. ಹೃದಯ ಪರಿಶುದ್ಧವಾಗಿ ಅಧ್ಯಾತ್ಮ ಜೀವನದ ಗುರಿಯನ್ನು ಸಾಧಿಸುವಂತಹ ಲಕ್ಷಣಗಳಿದ್ದಲ್ಲಿ ಪರಮಹಂಸರು ಅಂಥರಿಗೆ ಮಾರ್ಗದರ್ಶಕರಾಗುತ್ತಿದ್ದರು. ಉದಾಹರಣೆಗೆ, ಲಾಟು ಮಹಾರಾಜರು. ಮುಗ್ಧ ಹುಡುಗನಾಗಿ ದಕ್ಷಿಣೇಶ್ವರಕ್ಕೆ ಆಗಾಗ್ಗೆ ತನ್ನ ಯಜಮಾನನು ಕಳುಹಿಸುತ್ತಿದ್ದ ಹಣ್ಣು ಹಂಪಲುಗಳನ್ನು ತಂದು ಪರಮಹಂಸರಿಗೆ ಅರ್ಪಿಸುತ್ತಿದ್ದ ಮುಗ್ಧ ಬಾಲಕ ಲಾಟು. ಆದರೆ ಈ ಮುಗ್ಧ ಬಾಲಕನ ಆಂತರ್ಯದಲ್ಲಿ ಅದ್ಭುತವಾದ ಅಧ್ಯಾತ್ಮಿಕ ಶಕ್ತಿಯ ಸೆಲೆ ಅಡಗಿದೆ ಎಂಬುದನ್ನು ಅರಿತವರು ಪರಮಹಂಸರು. ಈ ಕಾರಣದಿಂದಲೋ ಎಂಬಂತೆ ಸಂನ್ಯಾಸ ದೀಕ್ಷೆ ಪಡೆಯುವ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಲಾಟು ಮಹಾರಾಜರಿಗೆ ಸ್ವಾಮಿ ಅದ್ಭುತಾನಂದ ಎಂಬ ನಾಮಾಂಕಿತವನ್ನು ನೀಡಿದರು. ಕಾರಣ, ಆತ್ಮಾನುಸಂಧಾನವನ್ನು, ಆತ್ಮಜ್ಞಾನವನ್ನು ಪಡೆದು ಅಧ್ಯಾತ್ಮ ಜೀವನದ ಉತ್ತುಂಗ ಸ್ಥಿತಿಯನ್ನು ಹೊಂದಿದ ಮಹಾನ್ ಸಾಧಕರಾಗಿದ್ದರು ಸ್ವಾಮಿ ಅದ್ಭುತಾನಂದಜೀ.
ರಾಮಕೃಷ್ಣರು ತಮ್ಮ ಬಳಿ ಸಾರುವವರಿಗೆ ಅಧ್ಯಾತ್ಮದ ವಿಚಾರ ಬಿಟ್ಟು ಬೇರಾವುದೇ ವಿಚಾರಗಳ ಗಂಧ ತಾಗಲು ಬಿಡುತ್ತಿರಲಿಲ್ಲ. ಅವರ ಉಪದೇಶದ ಒಂದು ಮಾದರಿ ಹೀಗಿದೆ:
‘ಸರಳ ಭಾವದಿಂದ ಭಗವಂತನಿಗೆ ಪ್ರಾರ್ಥನೆ ಮಾಡು; ಹೇ ಭಗವಂತ ನಿನ್ನ ದರ್ಶನ ನೀಡು ಅಂತ, ಮತ್ತೆ ಕಣ್ಣೀರು ಸುರಿಸಿ ಪ್ರಾರ್ಥಿಸಿಕೋ; ಹೇ ಭಗವಂತ, ಕಾಮ ಕಾಂಚನದಿಂದ ನನ್ನ ಮನಸ್ಸು ವಿಮುಖವಾಗುವಂತೆ ಮಾಡು ಎಂದು... ಸಚ್ಚಿದಾನಂದನೇ ಗುರು ರೂಪ ಧರಿಸಿ ಧರೆಗೆ ಬರುತ್ತಾನೆ. ಮನುಷ್ಯ ಗುರುವಿನಿಂದ ದೀಕ್ಷೆಯನ್ನು ಪಡೆದ ವ್ಯಕ್ತಿ. ಆತನನ್ನು ಕೇವಲ ಮನುಷ್ಯನೆಂದು ಭಾವಿಸಿದ್ದೇ ಆದರೆ, ಆ ದೀಕ್ಷಿತನಿಗೆ ಯಾವ ಉನ್ನತಿಯೂ ಉಂಟಾಗದು. ಆತನನ್ನು ಸಾಕ್ಷಾತ್ ಭಗವಂತನೇ ಎಂಬುದಾಗಿ ಭಾವಿಸಿದರೆ ಶ್ರದ್ಧೆಯುಂಟಾಗುವುದು. ಶ್ರದ್ಧೆಯೊಂದು ಉಂಟಾಯಿತು ಎಂದರೆ ಎಲ್ಲಾ ದೊರೆತ ಹಾಗೆಯೇ’.