ಕೆಲಸ ಬಾಕಿ ಇದ್ದರೆ ಒತ್ತಡ ಹೆಚ್ಚು

mental health
ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ಕೆ.ಎಸ್.ವಿಜಯ್‌ಕುಮಾರ್ ಉದ್ಘಾಟಿಸಿದರು. ನವೀನ್‌ಕುಮಾರ್, ಜಯಣ್ಣ, ಉಷಾ ಇತರರಿದ್ದರು.
Published on

ಚಿಕ್ಕಮಗಳೂರು: ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಕಾಲದಲ್ಲಿ ಕೆಲಸವನ್ನು ಮಾಡಿ ಮುಗಿಸಿದಾಗ ಒತ್ತಡ ಕಡಿಮೆಯಾಗುತ್ತದೆ. ಬಾಕಿ ಉಳಿಸಿಕೊಂಡರೆ ಒತ್ತಡ ಹೆಚ್ಚಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಖಿನ್ನತೆಗೂ ಕಾರಣವಾಗಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ಕೆ.ಎಸ್.ವಿಜಯ್‌ಕುಮಾರ್ ಹೇಳಿದರು.

ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ಇಲಾಖೆ, ಮಾನಸಿಕ ಆರೋಗ್ಯ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಆಲೋಚನೆ ಮತ್ತು ಚಿಂತೆಯ ಪರಿಣಾಮವಾಗಿ ಅನೇಕರು ಒತ್ತಡ ಅನುಭವಿಸುತ್ತಾರೆ. ಈ ರೀತಿಯ ಒತ್ತಡ ಅತಿಯಾದ ವಿಶ್ಲೇಷಣೆ ಮತ್ತು ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲದ ಸಮಸ್ಯೆಗಳನ್ನು ಕಲ್ಪಿಸಿಕೊಳ್ಳುವುದರಿಂದ ಉಂಟಾಗುತ್ತದೆ. ಈ ಭಯದಿಂದ ವೈಯಕ್ತಿಕವಾಗಿ ಒತ್ತಡ ಅನುಭವಿಸಬೇಕಾಗುತ್ತದೆ ಎಂದರು.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ದಿನನಿತ್ಯದ ಜಂಜಾಟ, ಒತ್ತಡ, ಆಲೋಚನೆ, ಮಾನಸಿಕ ನೆಮ್ಮದಿ ಕೆಡಿಸುವ ಸಂಗತಿಗಳಿಂದಾಗಿ ತುಂಬ ಜನರು ಮಾನಸಿಕ ಖಿನ್ನತೆ ಮತ್ತು ಅಸ್ವಸ್ಥತೆಗೆ ಗುರಿಯಾಗುತ್ತಿದ್ದಾರೆ. ಇಂತಹ ಆಲೋಚನೆಗಳಿಂದ ಹೊರಬಂದು ಸುಗಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ, ಒತ್ತಡವು ಜೀವನದ ಒಂದು ಭಾಗ. ಅದನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಸರಿಯಾಗಿ ನಿರ್ವಹಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಆಗ ಬದುಕಿನಲ್ಲಿ ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂದು ಹೇಳಿದರು.
ವಂದೇ ಮಾತರಂ ಟ್ರಸ್ಟ್ ಪ್ರೀತೇಶ್, ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಮನೋ ಸಾಮಾಜಿಕ ಕಾರ್ಯಕರ್ತ ಎಸ್.ಎಚ್.ಜಯಣ್ಣ, ನರ್ಸಿಂಗ್ ಅಧಿಕಾರಿ ಉಷಾ, ಸಹಾಯಕ ಜೈಲರ್ ಬೊಂಗಾಳೆ, ಆಪ್ತ ಸಮಾಲೋಚಕಿ ಆಶಾ, ಶಿಕ್ಷಕ ರಾಜ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net