

ಕಾಬುಲ್: ಪಾಕಿಸ್ತಾನ ನಮಗೆ 2ನೇ ಮನೆ ಇದ್ದಂತೆ. ಅದರೊಟ್ಟಿಗೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು. ಭಾರತದ ಜತೆಗೂ ನಾವು ಉತ್ತಮ ಮೈತ್ರಿ ಹೊಂದಲು ಬಯಸುತ್ತೇವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸಂದರ್ಶನದಲ್ಲಿ ಹೇಳಿದ್ದಾನೆ. ಪಾಕ್ ಜತೆಗೆ ನಾವು ಗಡಿ ಹಂಚಿಕೊಂಡಿದ್ದೇವೆ. ಧಾರ್ವಿುಕವಾಗಿ ಪಾಕ್ ಜತೆಗೆ ಸಾಂಪ್ರದಾಯಿಕ ನಂಟು ಇದೆ. ಎರಡೂ ದೇಶಗಳ ಜನರ ಮಧ್ಯೆ ನೇರ ಸಂರ್ಪಕ ಇದೆ. ಆದರೆ, ನಮ್ಮ ವ್ಯವಹಾರದಲ್ಲಿ ಪಾಕ್ ಎಂದೂ ಹಸ್ತಕ್ಷೇಪ ಮಾಡಿಲ್ಲ. ದೇಶದಲ್ಲಿ ಇಸ್ಲಾಂ ಅನುಸಾರವೇ ಹೊಸ ಸರ್ಕಾರ ರಚನೆ ಆಗಲಿದೆ ಎಂದಿದ್ದಾನೆ. ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ. ಅವರನ್ನು ಬೆದರಿಸುವುದಿಲ್ಲ. ಉದ್ಯೋಗಸ್ಥ ಮಹಿಳೆಯರು ಸುರಕ್ಷತೆಯ ದೃಷ್ಟಿಯಿಂದ ಕಚೇರಿಗೆ ಸದ್ಯ ಹೋಗುವುದು ಬೇಡ. ಮನೆಯಿಂದಲೇ ಕಾರ್ಯನಿರ್ವಹಿಸಲಿ ಎಂದು ಮಜಾಹಿದ್ ತಿಳಿಸಿದ್ದಾನೆ.
ಅಣ್ವಸ್ತ್ರ ಭಯ: ತಾಲಿಬಾನಿಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸದಂತೆ ಮತ್ತು ಅಲ್ಲಿನ ಅಣ್ವಸ್ತ್ರಗಳನ್ನು ವಶಪಡಿಸಿ ಕೊಳ್ಳದಂತೆ ಅಧ್ಯಕ್ಷ ಜೋ ಬೈಡೆನ್ ನೋಡಿಕೊಳ್ಳಬೇಕು. ಅಣ್ವಸ್ತ್ರ ತಾಲಿಬಾನ್ಗಳ ಕೈವಶವಾದರೆ ದೊಡ್ಡ ಪ್ರಮಾದವೇ ಸಂಭವಿಸುತ್ತದೆ ಎಂದು ಅಮೆರಿಕದ ಸಂಸದರು ಎಚ್ಚರಿಸಿದ್ದಾರೆ.
35 ಮಂದಿ ವಾಪಸ್: ಕಾಬುಲ್ನಿಂದ 35 ಮಂದಿ ಭಾರತಕ್ಕೆ ಹಿಂದಿರುಗಿದ್ದಾರೆ. ಪ್ರಯಾಣಕ್ಕೆ ಅನುಮತಿ ಪಡೆದಿದ್ದ 180 ಮಂದಿ ಕಾಬುಲ್ನ ವಿಮಾನ ನಿಲ್ದಾಣಕ್ಕೆ ಸಕಾಲದಲ್ಲಿ ಆಗಮಿಸಲಿಲ್ಲ. ಹೀಗಾಗಿ 24 ಭಾರತೀಯರು, 11 ನೇಪಾಳಿಗಳನ್ನು ಮಾತ್ರ ಕರೆತರಲಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಫ್ಘನ್ನಲ್ಲಿ ಒಂದು ಸಾವಿರ ಭಾರತೀಯರು ಇದ್ದಾರೆ ಎನ್ನಲಾಗಿದೆ.
ಅಫ್ಘನ್ ಸಂಸದೆ ಗಡಿಪಾರು: ಇಸ್ತಾಂಬುಲ್ನಿಂದ ದೆಹಲಿಗೆ ಆ. 20ರಂದು ಬಂದಿದ್ದ ಅಫ್ಘನ್ನ ಸಂಸದೆ ರಂಗಿನಾ ಕಾರ್ಗರ್ ಅವರನ್ನು ವಾಪಸು ಕಳುಹಿಸಲಾಗಿದೆ. ಆದರೆ, ಈ ಬೆಳವಣಿಗೆ ತನ್ನ ಗಮನಕ್ಕೆ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ವಲಸೆಗೆ ಸಂಬಂಧಿಸಿದ ದಾಖಲೆ ಸಮರ್ಪಕವಾಗಿಲ್ಲವೆಂದು ತಮ್ಮನ್ನು ವಾಪಸು ಕಳುಹಿಸಲಾಯಿತು. ಆದರೆ, ಇದೇ ಪಾಸ್ಪೋರ್ಟ್ನಲ್ಲಿ ಈ ಹಿಂದೆ ಹಲವು ಸಾರಿ ಭಾರತಕ್ಕೆ ಬಂದಿದ್ದೆ. ಆಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗೇಕೆ ಸಮಸ್ಯೆ ತಲೆದೋರಿತು ಎಂಬುದು ತಿಳಿಯಲಿಲ್ಲ ಎಂದು ರಂಗಿನಾ ಕಾರ್ಗರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಜಶೀರ್ನಲ್ಲಿ ತಾಲಿಬಾನ್ಗೆ ಹಿನ್ನಡೆ: ಅಫ್ಘನ್ನ ಪಂಜಶೀರ್ ಪ್ರಾಂತ್ಯವನ್ನು ವಶಪಡಿಸಿ ಕೊಳ್ಳಲು ತಾಲಿಬಾನ್ ಬುಧವಾರ ನಡೆಸಿದ ಪ್ರಯತ್ನವನ್ನು ನಾರ್ತನ್ ಮೈತ್ರಿಕೂಟ ವಿಫಲ ಗೊಳಿಸಿದೆ. ಬಡಕ್ಷಾನ್ನ ಅಂಜುಮನ್ ಪಾಸ್ ಮೂಲಕ ಪಂಜಶೀರ್ ಪ್ರವೇಶಕ್ಕೆ ತಾಲಿಬಾನಿಗಳು ಯತ್ನಿಸಿದರು. ಆದರೆ, ನಾರ್ತನ್ ಮೈತ್ರಿಕೂಟದ ಭದ್ರತಾ ಪಡೆ ಅವರನ್ನು ಹಿಮ್ಮೆಟ್ಟಿಸಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹಲವರು ಸತ್ತಿದ್ದಾರೆ .
ಹೆಲಿಕಾಪ್ಟರ್ ಹಾರಿಸಲು ಉಗ್ರರ ಯತ್ನ: ಕಂದಹಾರ್ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕ ವಾಯುಪಡೆಗೆ ಸೇರಿದ ಯುಎಚ್-60 ಬ್ಲಾಕ್ಹಾಕ್ ಹೆಲಿಕಾಪ್ಟರ್ಗಳನ್ನು ತಾಲಿಬಾನ್ಗಳು ವಶ ಪಡಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಹೆಲಿಕಾಪ್ಟರ್ಗಳನ್ನು ಎಳೆದೊಯ್ಯುತ್ತಿರುವ ವಿಡಿಯೋ ಇದು ಎಂದು ಹೇಳಲಾಗಿದೆ. ತಾಲಿಬಾನಿಗಳು ಹೆಲಿಕಾಪ್ಟರ್ ಹಾರಾಟ ಮಾಡುವ ಅಥವಾ ಈ ಬಗ್ಗೆ ತನ್ನವರಿಗೆ ತರಬೇತಿ ನೀಡುವ ಪ್ರಯತ್ನಕ್ಕೆ ಕೈಹಾಕಿದೆ ಎಂದು ವಿಶ್ಲೇಷಿಸಲಾಗಿದೆ.
ಕರ್ಜೆ, ಅಬ್ದುಲ್ಲಾ ಗೃಹಬಂಧನ: ಅಫ್ಘನ್ನ ಮಾಜಿ ಅಧ್ಯಕ್ಷ ಹಮೀದ್ ಕರ್ಜೆ ಮತ್ತು ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ತಾಲಿಬಾನಿಗಳು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಸಿಎನ್ಎನ್ ಗುರುವಾರ ವರದಿ ಮಾಡಿದೆ. ಇವರಿಬ್ಬರನ್ನು ಹೊರಗೆ ಹೋಗದಂತೆ ನಿರ್ಬಂಧಿಸಿರುವ ತಾಲಿಬಾನಿಗಳು, ಅವರ ಕಾರನ್ನು ವಶ ಪಡಿಸಿಕೊಂಡಿವೆ.
ಬಾಟಲ್ ನೀರಿಗೆ 3 ಸಾವಿರ ರೂ.!: ಕಾಬೂಲ್ ಏರ್ಪೋರ್ಟ್ನ ಬಳಿ ಕುಡಿಯುವ ನೀರು, ಆಹಾರಕ್ಕೆ ತತ್ವಾರ ಉಂಟಾಗಿದ್ದು, ಒಂದು ಬಾಟಲ್ ನೀರನ್ನು 40 ಡಾಲರ್ಗೆ (ಸುಮಾರು 3 ಸಾವಿರ ರೂ.) ಮಾರಾಟ ಮಾಡಲಾಗುತ್ತಿದೆ. ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್ (7,400 ರೂ.) ಪಡೆಯಲಾಗುತ್ತಿದೆ. ಮಾರಾಟಗಾರರು ಅಫ್ಘನ್ ಕರೆನ್ಸಿಯನ್ನು ಪಡೆಯಲು ನಿರಾಕರಿಸುತ್ತಿದ್ದು, ಡಾಲರ್ನಲ್ಲೇ ಹಣ ಪಡೆಯುತ್ತಿದ್ದಾರೆ.
140 ಸಿಖ್ಖರನ್ನು ತಡೆದ ತಾಲಿಬಾನ್: ಅಫ್ಘನ್ನಲ್ಲಿರುವ ಸಿಖ್ ಮತ್ತು ಹಿಂದು ಸಮುದಾಯದ 140 ಮಂದಿಯನ್ನು ದೇಶ ಬಿಟ್ಟುಹೋಗದಂತೆ ತಾಲಿಬಾನಿಗಳು ತಡೆದಿದ್ದಾರೆ. ಅಫ್ಘನ್ ಈ ಸಿಖ್ಖರು ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮ ಶತಮಾನೋತ್ಸವದಲ್ಲಿ ಭಾಗಿಯಾಗಲು ಭಾನುವಾರ ದೆಹಲಿಗೆ ಆಗಮಿಸಲು ಹೊರಟ್ಟಿದ್ದರು. ಅಫ್ಘನ್ನಿಂದ ಇನ್ನಷ್ಟು ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಅಫ್ಘನ್ ವಿಷಯದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಪೂರ್ಣ ಸಹಕಾರ ನೀಡಲಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ಸರ್ಕಾರ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು.
| ಎಂ.ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕ
ಅಫ್ಘನ್ನ ಸಂಸತ್ ಭವನ, ಡ್ಯಾಂ, ರಸ್ತೆಗಳನ್ನು ನಿರ್ವಿುಸಿಕೊಟ್ಟಿರುವ ಭಾರತ ಕಾರ್ಯ ಶ್ಲಾಘನೀಯ ಮತ್ತು ಇದು ಅಫ್ಘನ್ಗೆ ಭಾರತ ನೀಡಿರುವ ಕೊಡುಗೆಗಳು. ಆದರೆ, ಅಶ್ರಫ್ ಘನಿ ಸರ್ಕಾರವನ್ನು ಭಾರತ ಬೆಂಬಲಿಸಿದ್ದನ್ನು ಮಾತ್ರ ತೀವ್ರವಾದಿಗಳು ವಿರೋಧಿಸಿದ್ದಾರೆ ಎಂದು ತಾಲಿಬಾನ್ನ ವಕ್ತಾರ ಸುಹೈಲ್ ಶಾಹೀನ್ ಭಾರತದ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾನೆ. ಭಾರತ ನಿರ್ವಿುಸಿರುವ ಸಂಸತ್ ಭವನವು ಪಶ್ಚಿಮದ ಪ್ರಜಾತಂತ್ರದ ದ್ಯೋತಕ. ಆದರೆ ಇದನ್ನು ಹಾಳುಗೆಡವುದಿಲ್ಲ. ಇದನ್ನು ಜನರ ಅಥವಾ ಇಸ್ಲಾಮಿಕ್ ಶುರಾಕ್ಕೆ (ಕುರಾನ್ನಲ್ಲಿ ಉಲ್ಲೇಖಿತವಾದ ಅರೇಬಿಕ್ ಮಂಡಳಿ) ಬಳಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಶಾಹೀನ್ ಉತ್ತರಿಸಿದ್ದಾನೆ.
ಅಫ್ಘಾನಿಸ್ತಾನದ ಬಿಕ್ಕಟ್ಟು ಕುರಿತಂತೆ ರ್ಚಚಿಸಲು ಕೇಂದ್ರ ಸರ್ಕಾರ ಗುರುವಾರ ಕರೆದಿದ್ದ ಸಭೆಯಲ್ಲಿ ಭಾರತೀಯರ ತುರ್ತು ಸ್ಥಳಾಂತರವೇ ಮೊದಲ ಅದ್ಯತೆ ಆಗಬೇಕೆಂಬ ಒಕ್ಕೊರಲ ಒತ್ತಾಯ ವ್ಯಕ್ತವಾಯಿತು. ದೋಹಾ ನಿರ್ಣಯವನ್ನು ತಾಲಿಬಾನ್ಗಳು ಉಳಿಸಿಕೊಂಡಿಲ್ಲವಾದ ಕಾರಣ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಿಂದ ಸ್ಥಳಂತರವಾಗಲು 15 ಸಾವಿರ ಮಂದಿ ನೆರವು ಬಯಸಿದ್ದಾರೆ. ಆದರೆ, ಭಾರತೀಯರ ಸ್ಥಳಾಂತರಕ್ಕೆ ಮೊದಲ ಆದ್ಯತೆ. ಈಗ ಬಹುತೇಕ ಭಾರತೀಯರು ಸ್ವದೇಶಕ್ಕೆ ಬಂದಿದ್ದಾರೆ. ಇನ್ನೂ ಪೂರ್ಣಪ್ರಮಾಣದಲ್ಲಿ ಭಾರತೀಯರ ಸ್ಥಳಾಂತರ ಆಗಿಲ್ಲ. ಎಲ್ಲರನ್ನೂ ಖಂಡಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ಅಫ್ಘನ್ ಪರಿಸ್ಥಿತಿ ಕುರಿತು ಸಭೆಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು. ಭಾರತೀಯರು ಮಾತ್ರವಲ್ಲದೆ ಭಾರತಕ್ಕೆ ಬರಲು ಇಚ್ಛಿಸಿರುವ ಅಫ್ಘನ್ನರಿಗೆ ಇ-ವೀಸಾ ನೀತಿ ಜಾರಿ ಮಾಡಲಾಗಿದೆ. ಇದನ್ನು ಹೊಂದಿದವರು ದೇಶಕ್ಕೆ ಬರಬಹುದು. ಇವರೆಲ್ಲರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದರು. ಇದುವರೆಗೆ ಭಾರತದ ದೂತಾವಾಸದ 175 ಅಧಿಕಾರಿಗಳು ಮತ್ತು ಸಿಬ್ಬಂದಿ, 263 ಭಾರತೀಯರು, 112 ಮಂದಿ ಅಫ್ಘನ್ನ ಸಿಖ್ ಮತ್ತು ಹಿಂದುಗಳು, ಅನ್ಯದ ದೇಶದ 15 ನಾಗರಿಕರನ್ನು ಒಟ್ಟಾರೆ 565 ಮಂದಿಯನ್ನು ಕರೆತರಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಕೇಂದ್ರ ಸಚಿವಾರದ ಪ್ರಲ್ಹಾದ್ ಜೋಶಿ, ಪಿಯೂಷ್ ಗೋಯಲ್, ಕಾಂಗ್ರೆಸ್ ಮುಖಂಡರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆಯ ನಾಯಕ ಟಿ.ಆರ್.ಬಾಲು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಡಿಯ ಪ್ರಸನ್ನ ಆಚಾರ್ಯ, ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ಏನಿದು ದೋಹಾ ನಿರ್ಣಯ?: ಕತಾರ್ ರಾಜಧಾನಿ ದೋಹಾದಲ್ಲಿ 2 ವಾರಗಳ ಹಿಂದೆ (ತಾಲಿಬಾನ್ ಕಾಬುಲ್ಗೆ ಲಗ್ಗೆ ಇಡುವು ದಕ್ಕೂ ಮುನ್ನ) ನಡೆದ ಮಾತುಕತೆ ವೇಳೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಪದತ್ಯಾಗ ಮಾಡಬೇಕು, ಮಧ್ಯಂತರ ಸರ್ಕಾರ ರಚನೆಗೆ ಚರ್ಚೆ ಆರಂಭಿಸಬೇಕು. ಇದಕ್ಕೆ ಪ್ರತಿಯಾಗಿ ತಾಲಿಬಾನ್ಗಳು ಕದನವಿರಾಮ ಘೋಷಣೆ ಮಾಡಬೇಕು ಎಂಬ ನಿರ್ಣಯಕ್ಕೆ ಸಮ್ಮತಿಸಲಾಗಿತ್ತು. ಆದರೆ, ಇದನ್ನು ತಾಲಿಬಾನ್ಗಳು ಪಾಲಿಸಿಲ್ಲ.