ಮನೆ ಬಿದ್ದರೆ ತಕ್ಷಣ ಪರಿಹಾರ ಕೊಡಿ

mescom sabhe
ಸಾಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಪಂಚಾಯತ್‌ರಾಜ್ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣಬೇಳೂರು ಮಾತನಾಡಿದರು.
Published on

ಸಾಗರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡ್ಯಾಂಗಳೆಲ್ಲ ಭರ್ತಿಯಾಗಿದ್ದರೂ ಲೋಡ್‌ಶೆಡ್ಡಿಂಗ್ ಮಾಡಿತ್ತು. ರಾಜ್ಯದಲ್ಲಿ ಈ ವರ್ಷ ಬಿರುಬೇಸಿಗೆ ನಡುವೆಯೂ 24 ತಾಸು ವಿದ್ಯುತ್ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರದ್ದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ಪಂಚಾಯತ್‌ರಾಜ್ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಆಗುತ್ತಿರುವುದರಿಂದ ಅಲ್ಲಲ್ಲಿ ಮರ ಬೀಳುವುದು, ರಸ್ತೆ, ಮೋರಿ ಕುಸಿತ, ಮನೆ ಕುಸಿಯುವ ಸಾಧ್ಯತೆ ಇರುತ್ತದೆ. ಮನೆ ಕಳೆದುಕೊಂಡವರಿಗೆ ಗ್ರಾಪಂನಿಂದ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡಿ. ಸಂತ್ರಸ್ತರಿಗೆ ಬಾಡಿಗೆ ಮನೆ ಮಾಡಿಕೊಡುವ ಜತೆಗೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸಿ. ರಸ್ತೆಯಲ್ಲಿ ಮರ ಬಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ ಬರುವ ತನಕ ಕಾಯದೆ ಸ್ಥಳೀಯರನ್ನು ಬಳಸಿಕೊಂಡು ತೆರವುಗೊಳಿಸಿ ಎಂದು ಸೂಚಿಸಿದರು.
ಮೆಸ್ಕಾಂ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಒಂದೊಮ್ಮೆ ನಿಮಗೆ ಕೆಲಸ ಮಾಡಲು ಆಗದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ. ಜನರ ಸೇವೆ ಮಾಡದೇ ಇರುವವರು ನಮ್ಮ ತಾಲ್ಲೂಕಿನಲ್ಲಿ ಇರುವುದು ಬೇಡ. ಕೆಲವು ಕಡೆಗಳಲ್ಲಿ ಮೆಸ್ಕಾಂ ಕಾಮಗಾರಿ ವಿಳಂಬವಾಗಿದೆ. ಅಂತಹ ಗುತ್ತಿಗೆದಾರನನ್ನು ಬದಲಾಯಿಸಿ ಹೊಸಬರಿಗೆ ನೀಡಿ. ಆನಂದಪುರಂ, ತ್ಯಾಗರ್ತಿ ಭಾಗದ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿದ್ದು, ತಕ್ಷಣ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಹೊಸದಾಗಿ ಲೇಔಟ್ ಮಾಡಲು ಅವಕಾಶ ಕೊಡಬೇಡಿ. ಏಕೆಂದರೆ ಕಾನೂನು ಪಾಲನೆ ಮಾಡುತ್ತಿಲ್ಲ. ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ. ಕೆಲವರು ಹಣ ಮಾಡಿಕೊಳ್ಳಲು ಇದನ್ನು ದಂಧೆ ಮಾಡಿಕೊಂಡಿದ್ದಾರೆ. ಗ್ರಾಮಾಂತರದಲ್ಲಿ ನೆಲ ನುಂಗುವ ತಂಡಗಳೇ ಇವೆ. ಸರ್ಕಾರಿ ದಾಖಲೆಗಳನ್ನೇ ತಿದ್ದಿ ಮಾರಾಟ ಮಾಡುವ ಜಾಲ ಇದ್ದು ಎಲ್ಲವನ್ನೂ ಬಯಲಿಗೆಳೆದು ಜನರ ಮುಂದೆ ಇಡಲಾಗುವುದು ಎಂದು ಎಚ್ಚರಿಸಿದರು.
ಡೆಂೆ ನಿಯಂತ್ರಣಕ್ಕೆ ಗಪ್ಪಿ ಮೀನು:
ತಾಲೂಕಿನಲ್ಲಿ ಡೆಂೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾಗರ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆ ಉತ್ಪತ್ತಿ ಮಾಡುವ ಲಾರ್ವಾಗಳನ್ನು ತಿನ್ನುವ ಗಪ್ಪಿ ಮೀನು ಮರಿಗಳನ್ನು ಬಿಡಬೇಕು. ದಕ್ಷಿಣ ಕನ್ನಡದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಸಾಗರ ತಾಲೂಕಿನಲ್ಲೂ ನದಿ, ಕೆರೆಕಟ್ಟೆಗಳಲ್ಲಿ ಮೀನುಮರಿ ಬಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜತೆಗೆ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲೂ ಸೊಳ್ಳೆಯನ್ನು ನಿಯಂತ್ರಿಸಲು ಕಡ್ಡಾಯವಾಗಿ ಔಷಧ ಸಿಂಪಡಿಸಲು ಸೂಚನೆ ನೀಡಲಾಗಿದೆ ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ತಾಪಂ ಇಒ ಗುರುಕೃಷ್ಣ ಶೆಣೈ, ಮೆಸ್ಕಾಂ ಎಇಇ ಮೋಹನ್, ಟಿ.ಪಿ.ರಮೇಶ್, ನರೇಗಾ ಸಹಾಯಕ ನಿರ್ದೇಶಕ ಮಹ್ಮದ್ ಹನೀಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net