

Donald Trump: ಪಹಲ್ಗಾಮ್ನ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಉದ್ವಿಗ್ನತೆಯನ್ನು ನಾನು ಪರಿಹರಿಸಿದ್ದೇನೆ ಹಾಗೂ ಎರಡೂ ದೇಶಗಳ ಕುರಿತು ಮಾತುಕತೆಗಳು ಮತ್ತು ಸುಂಕಗಳನ್ನು ಬಳಸಿಕೊಳ್ಳುವ ಮೂಲಕ ಇವೆರಡು ದೇಶಗಳ ನಡುವಿನ ಬೆದರಿಕೆಗಳನ್ನು ಕಡಿಮೆ ಮಾಡಿದ್ದೇನೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಆಗಸ್ಟ್ 26) ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.
ನಾನು ಅವರನ್ನು ತಡೆಯದಿದ್ದರೆ ಭಾರತ ಮತ್ತು ಪಾಕ್ ಯುದ್ಧದಲ್ಲಿಯೇ ಕೊನೆಗೊಳ್ಳುತ್ತಿದ್ದವು. ಇವರ ಯುದ್ಧವನ್ನು ನಾನು ನೋಡಿದ್ದೇನೆ. ನಂತರ ಏಳು ಜೆಟ್ಗಳನ್ನು ಸಹ ಹೊಡೆದುರುಳಿಸಲಾಯಿತು. ಇನ್ನು ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನದ ಅಧಿಕಾರಿಗಳ ಜೊತೆ ಮಾತನಾಡಿ, ಸಂಘರ್ಷವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದೆ ಎಂದು ಹೇಳಿಕೊಂಡರು.
ಶ್ವೇತಭವನದಲ್ಲಿ ನಡೆದ ಕ್ಯಾಬಿನೇಟ್ ಸಭೆಯಲ್ಲಿ ಮಾತನಾಡಿದ ಟ್ರಂಪ್ ನಾನು ತುಂಬಾ ಅದ್ಭುತವಾದ ವ್ಯಕ್ತಿ ನರೇಂದ್ರ ಮೋದಿಯೊಂದಿಗೆ ಮಾತನಾಡಿದ್ದೇನೆ. ನಿಮ್ಮ ಹಾಗೂ ಪಾಕಿಸ್ತಾನದ ನಡುವೆ ನಡುವೆ ಏನು ನಡೆಯುತ್ತಿದೆ ಎಂದು ಸಹ ಹೇಳಿದ್ದೆ. ನಂತರ ನಾನು ಪಾಕಿಸ್ತಾನದ ವ್ಯಾಪಾರದ ಬಗ್ಗೆ ಮಾತಾಡುತ್ತಿದ್ದೇನೆ. ಎರಡೂ ದೇಶಗಳ ದ್ವೇಷ ಅಗಾಧವಾಗಿದೆ. ಈ ಸಂಘರ್ಷ ಬಹಳ ವರ್ಷಗಳಿಂದಲೇ ನಡೆಯುತ್ತಿದೆ ಎಂದು ತಿಳಿಸಿದರು.
ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ತಯಾರಿಲ್ಲ. ನೀವು ಯುದ್ಧವನ್ನು ನಿಲ್ಲಿಸಲು ಬಯಸಿದರೆ ನಾಳೆ ನನಗೆ ಮತ್ತೊಮ್ಮೆ ಕರೆ ಮಾಡಿ, ನಾನು ನಿಮ್ಮೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ನೀವು ಯುದ್ಧವನ್ನು ಕೊನೆಗೊಳಿಸದಿದ್ದರೆ, ನಾವು ನಿಮ್ಮ ಮೇಲೆ ಅತಿಯಾದ ಸುಂಕವನ್ನು ಏರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಟ್ರಂಪ್ನ ಅಂತಿಮ ಸೂಚನೆಯ ಮೇರೆಗೆ ಸುಮಾರು 5 ಗಂಟೆಗಳ ನಂತರ, ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನು ಮತ್ತೆ ಯುದ್ಧ ಸಂಭವಿಸಿದರೆ, ಅದನ್ನು ನಾನು ನಿಲ್ಲಿಸುತ್ತೇನೆ ಎಂದು ಟ್ರಂಪ್ ಆಶ್ವಾಸನೆ ನೀಡಿದರು. (ಏಜೆನ್ಸೀಸ್)