

ಸೊರಬ: ದುಡಿಯುವ ಕೈಗಳಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವರು ಶರಣರು ಎಂದು ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಗಂಗಮ್ಮ ಯುವಕ ಸಂಘದಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದಲ್ಲಿ ಮಾತನಾಡಿದ ಶ್ರೀಗಳು, ದೇವರು ಮೈಮೇಲೆ ಬಂದವರಿಂದ ದೇಶದ ಪ್ರಗತಿ ಅಸಾಧ್ಯ. ಬಾಯಿ ಮಾತಿನಿಂದ ದೇಶದ ಉದ್ಧಾರ ಸಾಧ್ಯವಿಲ್ಲ. ಆದರೆ ದೇಶದಲ್ಲಿ ದುಡಿಯುವ ಕೈಗಳೇ ಇರದಿದ್ದರೆ ದೇಶದ ಪ್ರಗತಿ ಅಸಾಧ್ಯ ಎಂದರು.
ದೇವರು ಕೈ, ಕಾಲು, ಕಣ್ಣು, ಕಿವಿ ಎಲ್ಲವನ್ನೂ ಎರಡೆರಡು ನೀಡಿದ್ದಾನೆ. ಆದರೆ ಬಾಯಿ ಮಾತ್ರ ಒಂದೇ ಇದೆ. ಕಾರಣ ಏನು ಎಂದು ಆಲೋಚಿದರೆ ಎರಡು ಬಾರಿ ದುಡಿಯಬೇಕು. ಎರಡು ಬಾರಿ ನಡೆಯಬೇಕು. ಎರಡು ಬಾರಿ ನೋಡಬೇಕು. ಎರಡು ಬಾರಿ ಕೇಳಬೇಕು. ಆದರೆ ಒಂದೆ ಬಾರಿ ಉಣ್ಣಬೇಕು. ಒಂದೆ ಬಾರಿ ಹೇಳಬೇಕು ಎಂಬುವ ಅರ್ಥವನ್ನು ದೇಹದ ರಚನೆ ಹೊಂದಿದೆ ಎಂದರು.
ಸಮಾಜ ಸೇವಕ ಡಾ. ಜ್ಞಾನೇಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತವೆ. ಬೆಚ್ಚನೆಯ ಅನುಭವ ನೀಡುತ್ತವೆ. ಯುವಕ ಸಂಘದವರು ಶ್ರಮ ವಹಿಸಿ ಸಂಸ್ಕೃತಿ, ಪರಂಪರೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ನಾಗರಾಜ ಗುತ್ತಿ ಮಾತನಾಡಿ, ಯುವಕ ಸಂಘದ ಸದಸ್ಯರು ಸಮಾಜ ಪರಿವರ್ತಿಸುವಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟು ಎಲ್ಲರನ್ನೂ ಕರೆಸಿ ಸಭೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮಧ್ಯ ಕರ್ನಾಟಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ವೀರೇಶ್ ಗೌಡ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸುಖವಾಗಿರಬೇಕು. ನಾವು ದುಡಿಮೆ ಮಾಡಬಹುದು. ಮತ್ತೊಬ್ಬರು ಕೂಲಿ ಮಾಡಬಹುದು. ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಕಾಯಕವೇ ಶ್ರೇಷ್ಠ ಎಂದು ತಿಳಿಸಿದರು.
ಗಣಪತಿ ಪೂಜೆ, ಹೋಮ ಹವನಾದಿಗಳು ನಡೆದವು. ದಾನಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಗಂಗಮ್ಮ ಯುವಕ ಸಂಘದ ರಂಜಿತ್, ರಾಕೇಶ್, ಸದಸ್ಯರು ಇದ್ದರು.