

ಚಾಮರಾಜನಗರ: ಇಂದು ನಗರದ ಯಳಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಆಸ್ಪತ್ರೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ನನಗೆ ಚಿಕ್ಕ ವಯಸ್ಸಿನಲ್ಲಿ ಜ್ವರ ಬಂದರೆ ಚಿಕನ್ ಬಿರಿಯಾನಿ, ಮಟನ್ ಫ್ರೈ ತಿನ್ನುತ್ತಿದ್ದೆ. ಈಗ ತಿಂದರೆ ಜ್ವರ ಜಾಸ್ತಿಯಾಗಿಬಿಡುತ್ತದೆ ಎಂದು ಹೇಳಿದ್ದಾರೆ.
"ನೀವ್ಯಾರಾದ್ರೂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೀರಾ ಎಂದು ವೇದಿಕೆ ಮೇಲಿದ್ದ ಸಚಿವರು, ಶಾಸಕರನ್ನು ಪ್ರಶ್ನಿಸಿದ ಸಿಎಂ, ನಾನು ಹೋಗಿಲ್ಲ" ಎಂದರು. "ವೈದ್ಯರ ಸಲಹೆ ಮೇರೆಗೆ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಳ್ಳೋಕೆ ದೆಹಲಿಗೆ ಹೋಗಿದ್ದೆ. ಜಯದೇವಕ್ಕೆ ವೈದ್ಯರು ಕಳುಹಿಸಿದ್ದರೆ ಅಲ್ಲಿಗೆ ಹೋಗುತ್ತಿದ್ದೆ. ಮೊದಲು ಆ ಆಸ್ಪತ್ರೆ ಚೆನ್ನಾಗಿತ್ತು ಎಂದಿದ್ದರು. ಹಾಗಾಗಿ ಅಲ್ಲಿಗೆ ಹೋದೆ" ಎಂದು ಹೇಳಿದರು.
ಈಗ ಮಹಿಳೆಯರಿಗೆ ಫ್ರೀ ಬಸ್ ಇದೆ. ಅದೇ ರೀತಿ ಪುರುಷರಿಗೂ ಉಚಿತ ಪ್ರಯಾಣ ಮಾಡಿಬಿಟ್ಟರೆ ಕೆಎಸ್ಆರ್ಟಿಸಿ ಮಾರಿ ಬಿಡಬೇಕಾಗುತ್ತದೆ. ಮಹಿಳೆಯರನ್ನು ನೀವು ಇಲ್ಲಿಗೆ ಬಸ್ನಲ್ಲಿ ಬರಲು ಹಣ ಕೊಟ್ಟು ಬಂದಿದ್ದೀರಾ? ತವರಿಗೆ, ದೇವಸ್ಥಾನಕ್ಕೆ ಎಲ್ಲ ಕಡೆಗೂ ಹಣ ಕೊಟ್ಟು ಹೋಗುತ್ತಿದ್ದೀರಾ? ಎಂದು ಸಿಎಂ ಪ್ರಶ್ನಿಸಿದರು.
ಮಹಿಳೆಯರೆಲ್ಲ ಇಲ್ಲ ಎಂದು ಹೇಳುತ್ತಿದ್ದಂತೆ, ಪುರುಷರು ನಮಗೂ ಫ್ರೀ ಮಾಡಿ ಎಂದು ಕೂಗು ಹಾಕಿದರು. ಪುರುಷರು ಹೇಳುತ್ತಿರುವುದೇನೆಂದು ಮತ್ತೆ ಸರಿಯಾಗಿ ಆಲಿಸಿದ ಸಿದ್ದರಾಮಯ್ಯ, ನಿಮಗೆ ಫ್ರೀ ಕೊಟ್ಟು ಬಿಟ್ಟರೆ ಸಾರಿಗೆಯನ್ನು ಮುಚ್ಚಿಬಿಡಬೇಕಾಗುತ್ತದೆ ಎಂದು ವೇದಿಕೆಯಲ್ಲೇ ನಗೆಚಟಾಕಿ ಹಾರಿಸಿದರು.