

ತೀರ್ಥಹಳ್ಳಿ: ಹೊಸಹಳ್ಳಿ-ಕೈಮರದಲ್ಲಿ ದೊಡ್ಡ ಮರವೊಂದು ರಸ್ತೆಗೆ ವಾಲಿ ನಿಂತಿದೆ. ನಾಗರಿಕರು ಕಡಿಯಲು ಹೇಳಿದರೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸ್ವತಃ ನಾನೇ ತಿಳಿಸಿದರು ಯಾಕೆ ಹಿಂದೇಟು ಹಾಕುತ್ತಿದ್ದೀರಿ. ಮರ ಬಿದ್ದು ಜನರು ಸತ್ತರೆ ಇಲಾಖೆ ಮೇಲೆ ಕೊಲೆ ಪ್ರಕರಣ ಹಾಕಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಸೋಮವಾರ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಮಳೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮರ ಬಿದ್ದರೆ ಶಾಲೆ, ಮನೆಗಳಿಗೆ ನಷ್ಟವಾಗುವ ಸಾಧ್ಯತೆ ಇದೆ. ತಕ್ಷಣಕ್ಕೆ ಕಟಾವಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಳೆಯಿಂದ ಬೆಜ್ಜವಳ್ಳಿ 80, ತೀರ್ಥಹಳ್ಳಿ ಉಪವಿಭಾಗದಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಬೇಸರಗೊಂಡ ಶಾಸಕ, ವಿದ್ಯುತ್ ಕಂಬಗಳನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದೆ. ಕಬ್ಬಿಣವಿಲ್ಲದ ಸಿಮೆಂಟ್ ಕಂಬಗಳು ಎಷ್ಟು ದಿನ ಉಳಿಯಲು ಸಾಧ್ಯ. ಜಂಗಲ್ ಕಟ್ಟಿಂಗ್ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ತಂಡವಾಗಿ ಕೆಲಸ ಮಾಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಏಳು ದಿನಗಳಿಂದ ಆಗುಂಬೆಗೆ ವಿದ್ಯುತ್ ಸಂಪರ್ಕ ಇಲ್ಲ. ಅಲ್ಲಿನ ಜನರು ಕತ್ತಲಿನಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆಗುಂಬೆ ಘಾಟಿ ರಸ್ತೆ ಮೊದಲ ಮಳೆಗೇ ಕುಸಿಯುವ ಹಂತಕ್ಕೆ ತಲುಪಿದೆ. ಸಾಕಷ್ಟು ಮರಗಳು ಘಾಟಿಯಲ್ಲಿ ಬೀಳುತ್ತಿದ್ದು ಧರೆ ಕುಸಿಯುವ ಸಂಭವ ಹೆಚ್ಚಿದೆ. ಅಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು. ಮರ ತೆರವಿಗೆ ಅರಣ್ಯ ಇಲಾಖೆ ಕಟಾವು ಯಂತ್ರ ಖರೀದಿಸಬೇಕು ಎಂದು ತಿಳಿಸಿದರು.
ಕರೊನಾ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಜ್ವರ ಬಾಧಿತರ ತಪಾಸಣೆ ಮಾಡಬೇಕು. ಹೊರ ಮತ್ತು ಒಳರೋಗಿ ವಿಭಾಗದಲ್ಲಿ ಎಚ್ಚರಿಕೆ ಕ್ರಮ ವಹಿಸಿ ಎಂದು ಸಲಹೆ ನೀಡಿದರು. ಆಗುಂಬೆಯ ವಸತಿ ನಿಲಯಗಳಲ್ಲಿ ಹೊರ ಜಿಲ್ಲೆಯವರಿಗೆ ಅವಕಾಶ ನೀಡಲಾಗುತ್ತಿದೆ. ಸ್ಥಳೀಯರಿಗೆ ವಸತಿ ಸೌಲಭ್ಯ ಸಿಗುತ್ತಿಲ್ಲ. ಇಂತಹ ನಾಟಕಗಳಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು.
ಮಳೆಹಾನಿಗೆ ಸಂಬಂಧಿಸಿ ತಾಲೂಕು ಆಡಳಿತ ಸಹಾಯವಾಣಿ ಕೇಂದ್ರ ತೆರೆದಿದೆ. ನಾಗರಿಕರು 08181-228239 ಕರೆ ಮಾಡಬಹುದು ಎಂದು ತಹಸೀಲ್ದಾರ್ ಎಸ್.ರಂಜಿತ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕೆಲಸಗಳಿಂದ ಧರೆಗಳನ್ನು ಕಡಿಯಲಾಗಿದೆ. ಧರೆಯ ಮೇಲಿನ ಮರಗಳು ಬೀಳುವ ಸ್ಥಿತಿಯಲ್ಲಿವೆ. ಮಣ್ಣು ಜಾರದಂತೆ ಸಿಮೆಂಟ್ ವಾಲ್ ನಿರ್ಮಿಸಿಕೊಡಿ ಎಂದು ಮೇಗರವಳ್ಳಿ ವಲಯಾರಣ್ಯಾಧಿಕಾರಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಆಗುಂಬೆ, ಭಾರತೀಪುರದಲ್ಲಿ ಗುಡ್ಡ ಕುಸಿತದ ಬಗ್ಗೆ ಎಚ್ಚರಿಸಲಾಗಿದೆ. ಮಳೆಗೆ ಹಾನಿಯಾಗುವ ಕಡೆಗಳಲ್ಲಿ ಮಾತ್ರ ವಾಲ್ ನಿರ್ಮಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಾಪಂ ಇಒ ಎನ್.ಶೈಲಾ ಇದ್ದರು.