

ICICI Bank : ಭಾರತದ ಎರಡನೇ ಅತಿದೊಡ್ಡ ಸಾಲದಾತ ಬ್ಯಾಂಕ್ ಎನಿಸಿಕೊಂಡಿರುವ ಐಸಿಐಸಿಐ, ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಗ್ರಾಹಕರಿಗೆ ಮಾಸಿಕ ಮಿನಿಮಮ್ ಬ್ಯಾಲೆನ್ಸ್ ಅನ್ನು ಹೆಚ್ಚಳ ಮಾಡಿದೆ. ಆದರೆ, ಇದು ಹೊಸದಾಗಿ ಖಾತೆ ತೆರೆಯುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
ಮಿನಿಮಮ್ ಬ್ಯಾಲೆನ್ಸ್ ಕುರಿತು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಇತ್ತೀಚಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪ್ರಕಾರ, ಆಗಸ್ಟ್ 1 ರಂದು ಅಥವಾ ನಂತರ ತಮ್ಮ ಉಳಿತಾಯ ಖಾತೆಗಳನ್ನು ತೆರೆದಿರುವ ಮೆಟ್ರೋ ನಗರ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ದಂಡವನ್ನು ತಪ್ಪಿಸಲು ಮಾಸಿಕ 50,000 ರೂ. ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ.
ಬಾಂಕಿನ ಹಳೆಯ ಗ್ರಾಹಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ಮಿನಿಮಮ್ ಬ್ಯಾಲೆನ್ಸ್ 10,000 ರೂ.ನೊಂದಿಗೆ ಮುಂದುವರಿಯಲಿದ್ದಾರೆ. ಮೆಟ್ರೋ ನಗರ ಮತ್ತು ನಗರ ಪ್ರದೇಶಗಳನ್ನು ಹೊರತುಪಡಿಸಿ, ಅರೆ ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರು 25,000 ರೂ. ಮಿನಿಮಮ್ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉಳಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು 10,000 ರೂ. ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ.
ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ ಈ ಹಿಂದೆ ಇದ್ದ 5000 ರೂ. ಮಿನಿಮಮ್ ಬ್ಯಾಲೆನ್ಸ್ ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ಶೇ. 6 ರಷ್ಟು ಅಥವಾ 500 ರೂಪಾಯಿಯನ್ನು ದಂಡವಾಗಿ ವಿಧಿಸಲಾಗುತ್ತದೆ.
ಮಿನಿಮಮ್ ಬ್ಯಾಲೆನ್ಸ್ ಹೊರತುಪಡಿಸಿ ಇನ್ನೂ ಒಂದು ಬದಲಾವಣೆಯನ್ನು ಐಸಿಐಸಿಐ ಬ್ಯಾಂಕ್ ಮಾಡಿದೆ. ಅದೇನೆಂದರೆ, ಉಳಿತಾಯ ಖಾತೆಗೆ 3 ಬಾರಿ ಉಚಿತವಾಗಿ ಹಣ ಜಮಾ ಮಾಡಬಹುದು. ಆ ಬಳಿಕ ಪ್ರತಿ ವ್ಯವಹಾರಕ್ಕೆ ಅಥವಾ ಡೆಪಾಸಿಟ್ಗೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ತಿಂಗಳಿಗೆ 3 ಬಾರಿ ಹಣ ಹಿಂಪಡೆಯುವ ಅಥವಾ ವಿತ್ಡ್ರಾ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಅಂದಹಾಗೆ, ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2020ರಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿದೆ. ಇದಕ್ಕೆ ತದ್ವಿರುತ್ತವಾಗಿ ಇತರ ಬ್ಯಾಂಕುಗಳಲ್ಲಿ ಹೆಚ್ಚಿನ ಬ್ಯಾಂಕ್ಗಳು ಮಿನಿಮಮ್ ಬ್ಯಾಲೆನ್ಸ್ ಮಿತಿಗಳನ್ನು ಕಾಯ್ದುಕೊಳ್ಳುತ್ತವೆ. ಇದರ ಮಿತಿ ಸಾಮಾನ್ಯವಾಗಿ 2,000 ದಿಂದ 10,000 ರೂ. ವರೆಗೂ ಇರುತ್ತದೆ. (ಏಜೆನ್ಸೀಸ್)