ನಾಯಕ ಅಂತ ನೋಡದೆ ನನ್ನ ಮೇಲೆಯೇ ಗರಂ ಆಗಿದ್ದರು: ಸಿರಾಜ್​ ಕುರಿತು ಅಚ್ಚರಿ ಹೇಳಿಕೆ ನೀಡಿದ ರಹಾನೆ! Mohammed Siraj

Mohammed Siraj
Published on

Mohammed Siraj : ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅತಿ ಹೆಚ್ಚು ವಿಕೆಟ್ ಪಡೆದು ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಅಲ್ಲದೆ, ಸರಣಿಯನ್ನು ಸಮಬಲ ಮಾಡುವಲ್ಲಿ ಸಿರಾಜ್​ ಮಹತ್ವದ ಪಾತ್ರವಹಿಸಿದರು. ಈ ಹಿನ್ನೆಲೆಯಲ್ಲಿ ಸಿರಾಜ್​ಗೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾದ ಆಟಗಾರ ಅಜಿಂಕ್ಯಾ ರಹಾನೆ ಕೆಲವು ಆಸಕ್ತಿದಾಯಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೆ, ಸಿರಾಜ್​ ಅವರ ಒಂದು ಗುಣ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದೇನೆಂದರೆ, ಎದುರಾಳಿ ತಂಡದ ವಿರುದ್ಧ ಮಾತ್ರವಲ್ಲದೆ ಕ್ರೀಡಾಂಗಣದಲ್ಲಿಯೂ ಅವರು ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ತಮ್ಮದೇ ತಂಡದ ಸದಸ್ಯರ ಬಗ್ಗೆಯೂ ಸಿರಾಜ್​ ಕೋಪ ಹೊರಹಾಕುತ್ತಾರೆ. ಇಂಗ್ಲೆಂಡ್ ಸರಣಿಯಲ್ಲಿ ಅವರು ಗಿಲ್ ಮತ್ತು ಧ್ರುವ್ ಜುರೆಲ್ ವಿರುದ್ಧ ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ಯಾರಾದರೂ ಕ್ಯಾಚ್​ ಬಿಟ್ಟಾಗ ಸಿರಾಜ್​ ಅವರ ಆಕ್ರೋಶದ ಕಟ್ಟೆ ಒಡೆಯುತ್ತದೆ. ಎದುರಾಳಿ ತಂಡದ ಆಟಗಾರರನ್ನು ಆಗಾಗ ಕೆಣಕುತ್ತಿರುತ್ತಾರೆ. ಮೈದಾನದಲ್ಲಿ ವಾಗ್ವಾದ ನಡೆದ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಕಷ್ಟು ಬಾರಿ ವೈರಲ್​ ಆಗಿವೆ.

2020-21ರಲ್ಲಿ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತು. ಆ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಸಿರಾಜ್ ಆಗ ತುಂಬಾ ಆಕ್ರಮಣಕಾರಿಯಾಗಿದ್ದರು. ಈ ಒಂದು ಗುಣವೇ ಸಿರಾಜ್​ ಅವರಲ್ಲಿರುವ ಅತ್ಯುತ್ತಮತೆಯನ್ನು ಹೊರತರುತ್ತದೆ ಎಂದು ರಹಾನೆ ಹೇಳಿದ್ದಾರೆ.

ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ರಹಾನೆ, ಸಿರಾಜ್ ಬಗ್ಗೆ ನನಗೆ ಇಷ್ಟವಾದದ್ದು ಏನೆಂದರೆ ಅವರು ಯಾವಾಗಲೂ ದೀರ್ಘ ಸ್ಪೆಲ್‌ಗಳನ್ನು ಎಸೆಯಲು ಇಷ್ಟಪಡುತ್ತಿದ್ದರು. 2020-21ರ ಸರಣಿಯಲ್ಲಿಯೂ ಸಹ ಸಿರಾಹ್​ ಅವರು ಅದೇ ತೀವ್ರತೆಯಿಂದ ಅದನ್ನು ಮಾಡಲು ಸಿದ್ಧರಿದ್ದರು. ಆಸ್ಟ್ರೇಲಿಯಾದಲ್ಲಿ, ಅವರು ಪಾದಾರ್ಪಣೆ ಮಾಡುವಾಗ ನಾನು ಅವರನ್ನು ಬಹಳ ತಡವಾಗಿ ಬೌಲಿಂಗ್​ಗೆ ಇಳಿಸಿದೆ. ಇದರಿಂದ ಅವರು ನನ್ನ ಮೇಲೆ ಕೋಪಗೊಂಡಿದ್ದರು ಎಂದರು.

ಸಿರಾಜ್​ ಅವರೊಳಗೆ ಇನ್ನೂ ಕೋಪವಿದೆ. ಅದೇ ಕೋಪವು ಸಿರಾಜ್ ಅವರ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಸರಣಿಯಲ್ಲಿ ನಾವು ಅದನ್ನು ನೋಡಿದ್ದೇವೆ. ಅವರ ಬೌಲಿಂಗ್‌ನಲ್ಲಿನ ಆಕ್ರಮಣಶೀಲತೆ ಮತ್ತು ಅವರು ಬೌಲಿಂಗ್ ಮಾಡುವ ತೀವ್ರತೆಯನ್ನು ನೋಡಿದರೆ, ಅವರು ತಮ್ಮ ಮೊದಲ ಎಸೆತವನ್ನು ಎಸೆಯುವ ಹೊತ್ತಿಗೆ ಯಾವಾಗಲೂ ವಾರ್ಮಪ್​ ಆಗಿರುತ್ತಾರೆ. ಇದು ಒಬ್ಬ ಶ್ರೇಷ್ಠ ಬೌಲರ್‌ನ ಶ್ರೇಷ್ಠ ಗುಣ ಎಂದು ರಹಾನೆ ಅವರು ಕೊಂಡಾಡಿದರು.

ಕೆಲವೊಮ್ಮೆ, ಇತರ ಬೌಲರ್‌ಗಳು ವಾರ್ಮಪ್ ಮಾಡಲು 8 ರಿಂದ 10 ಎಸೆತಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ಬೌಲರ್‌ಗಳು ಹಾಗೆ ಮಾಡಲು ಎರಡು ಎಸೆತಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಸಿರಾಜ್ ಯಾವಾಗಲೂ ಮೊದಲಿರುತ್ತಾರೆ. ಜೇಮ್ಸ್ ಆಂಡರ್ಸನ್ ಅವರಂತೆಯೇ ಸಿರಾಜ್ ಮೊದಲನೇ ಎಸೆತದಿಂದಲೇ ವಾರ್ಮಪ್​ ಆಗಿರುತ್ತಾರೆ. ಅವರು ಸ್ಪೆಲ್‌ನಲ್ಲಿ ತಮ್ಮ ಎಂಟನೇ ಅಥವಾ ಒಂಬತ್ತನೇ ಓವರ್ ಬೌಲ್ ಮಾಡುವಾಗಲೂ ಸಹ ಅದೇ ಆಕ್ರಮಣಶೀಲತೆ ಮತ್ತು ತೀವ್ರತೆಯನ್ನು ಹೊಂದಿರುತ್ತಾರೆ ಎಂದು ರಹಾನೆ ಹೇಳಿದರು.

ಸಿರಾಜ್​ ಅವರಲ್ಲಿ ಒಂದು ಬದಲಾವಣೆಯನ್ನು ನಾನು ಗಮನಿಸಿದ್ದೇನೆ. ಅದೇನೆಂದರೆ, ಅವರಿಗೆ ತನ್ನದೇಯಾದ ಮೈದಾನಗಳ ಮೇಲಿನ ವಿಶ್ವಾಸವಿದೆ. ಒಬ್ಬ ಬೌಲರ್, ನಾಯಕನ ಬಳಿ ಬಂದು ಈ ಮೈದಾನವನ್ನು ನನಗೆ ಕೊಡಿ ಅಂದರೆ, ಈ ಮೈದಾನದಲ್ಲಿ ನನ್ನನ್ನು ಹೆಚ್ಚಾಗಿ ಪರಿಗಣಿಸಿ ಎಂದು ಹೇಳಿದಾಗ, ಅದು ನಿಜವಾಗಿಯೂ ನಾಯಕನಿಗೆ ಸುಲಭವಾಗುತ್ತದೆ. ಈ ಸರಣಿಯಲ್ಲಿ, ಜಸ್​ಪ್ರೀತ್​ ಬುಮ್ರಾ ಇಲ್ಲದಿದ್ದಾಗ ಸಿರಾಜ್​ ತೆಗೆದುಕೊಂಡು ಜವಾಬ್ದಾರಿ ಅವರಿಗೆ ಸಹಾಯ ಮಾಡಿತು ಎಂದು ರಹಾನೆ ಹೇಳಿದರು.

ಅಂದಹಾಗೆ, ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭವಾಗುವ ಮೊದಲೇ, ಬುಮ್ರಾ ತನ್ನ ಕೆಲಸದ ಹೊರೆ ನಿರ್ವಹಿಸಲು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡುತ್ತಾರೆ ಎಂಬುದು ಸಾರ್ವಜನಿಕರಿಗೆ ಖಚಿತವಾಗಿತ್ತು. ನಂಬರ್ 1 ಟೆಸ್ಟ್ ಬೌಲರ್ ಆಗಿರುವ ಬುಮ್ರಾ ಅವರು ಆಡದ ಎರಡು ಟೆಸ್ಟ್ ಪಂದ್ಯಗಳಲ್ಲಿ, ಸಿರಾಜ್ ಜವಾಬ್ದಾರಿಯನ್ನು ಹೊತ್ತುಕೊಂಡು ವೇಗದ ದಾಳಿಯನ್ನು ಮುನ್ನಡೆಸಿದರು. ಐದು ಪಂದ್ಯಗಳ ಸರಣಿಯಲ್ಲಿ, ಸಿರಾಜ್ 185ಕ್ಕೂ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಿದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲೂ ಸಹ, ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರು.

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿನ ಸಿರಾಜ್ ಅವರ ಪ್ರದರ್ಶನದಿಂದಾಗಿ, ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೆ ಏರಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಸಿರಾಜ್ ಅವರನ್ನು ಪಂದ್ಯಶ್ರೇಷ್ಠ ಎಂದು ಆಯ್ಕೆ ಮಾಡಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net