ಐಸಿಎಆರ್: ಎಐಇಇಎ ಪರೀಕ್ಷೆ ಸೆಪ್ಟೆಂಬರ್ 16 ರಿಂದ

Exam
Published on

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ಎಐಇಇಎ ಪದವಿ ಪರೀಕ್ಷೆಯನ್ನು ಮುಂದೂಡಿದ್ದು, ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪರೀಕ್ಷೆಗಳಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಮೊದಲು ಸೆಪ್ಟೆಂಬರ್ 7 ಮತ್ತು 8 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಈಗ ಕ್ರಮವಾಗಿ ಸೆಪ್ಟೆಂಬರ್ 16, 17 ಮತ್ತು 22 ರಂದು ನಡೆಸಲಾಗುವುದು. ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪರೀಕ್ಷೆಗಳು ಈಗ ಸೆಪ್ಟೆಂಬರ್ 23 ರಂದು ನಡೆಯಲಿವೆ.

ಐಸಿಎಆರ್ ಪರೀಕ್ಷೆಯ ಇತರ ವಿವರಗಳೊಂದಿಗೆ ಪ್ರವೇಶ ಪತ್ರವನ್ನು ಪರೀಕ್ಷೆಗೆ 10 ದಿನಗಳ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಎನ್‌ಟಿಎ ದೃಢಪಡಿಸಿದೆ. ಹೀಗಾಗಿ, ಸೆಪ್ಟೆಂಬರ್ 7, ಸೋಮವಾರ ಐಸಿಎಆರ್ ಪದವಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಎನ್‌ಟಿಎ ನೀಡಿದ ವಿವರಗಳ ಪ್ರಕಾರ, ಪರೀಕ್ಷೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಪರೀಕ್ಷೆಯ ಅವಧಿ 150 ನಿಮಿಷಗಳು. ಒಟ್ಟು 150 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಮತ್ತು ಪ್ರತಿ ಸರಿಯಾಧ ಪ್ರಶ್ನೆಗೆ 4 ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಳೆಯಲಾಗುತ್ತದೆ. ಪರೀಕ್ಷೆಯ ಮಾಧ್ಯಮ ಹಿಂದಿ ಮತ್ತು ಇಂಗ್ಲಿಷ್ ಆಗಿದೆ.

ಕೃಷಿ ವಿವಿಗಳಲ್ಲಿ ಕೃಷಿ ಮತ್ತು ಸಂಬಂಧಿತ ವಿಜ್ಞಾನ (ಪಶುವೈದ್ಯಕೀಯ ವಿಜ್ಞಾನಗಳನ್ನು ಹೊರತುಪಡಿಸಿ) ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಎಐಇಇಎ ನಡೆಸಲಾಗುತ್ತದೆ. ಪರೀಕ್ಷೆಯನ್ನು ದೇಶದ 178 ನಗರಗಳಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಎನ್‌ಟಿಎ ಐಸಿಎಆರ್‌ನ ಅಧಿಕೃತ ಸೈಟ್‌ icar.nta.nic.in ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net