2,68,000 ನೆಗೆಟಿವ್… ಇದು ಸಾಮಾನ್ಯ ಅಟ್ಯಾಕ್​ ಅಲ್ಲ! ನೋವಿನ ವಿಷಯ ತೋಡಿಕೊಂಡ ಹೆಸರಾಂತ ನಿರ್ದೇಶಕ

ವಿಜಯವಾಣಿ - 2024-08-09T105849.184
Published on

ತೆಲಂಗಾಣ: ಸೆಲೆಬ್ರಿಟಿ ಅಂದಮೇಲೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರಲೇ ಬೇಕು. ಒಂದು ಸಿನಿಮಾ ಟೈಟಲ್​ನಿಂದ ಹಿಡಿದು ಚಿತ್ರೀಕರಣ, ಹೊಸ ಅಪ್ಡೇಟ್​, ಲಿರೀಕಲ್​ ಹಾಡುಗಳು, ಟೀಸರ್​, ಟ್ರೇಲರ್​ ಹೀಗೆ ಹಲವಾರು ಮಾಹಿತಿಗಳನ್ನು ಇದೇ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಆಯಾ ಚಿತ್ರತಂಡ ಹಾಕುವ ವಿಷಯಗಳು ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗಬೇಕು ಎಂದೇನಿಲ್ಲ. ಕೆಲವರಿಗೆ ಇಷ್ಟವಾಗದೆ ಇರಬಹುದು. ಇನ್ನೂ ಕೆಲವರು ಅದನ್ನು ಟ್ರೋಲ್ ಮೂಲಕ ಟೀಕೆಯೂ ಮಾಡಬಹುದು. ಇದು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿ ಹೋಗಿದೆ. ಸಾಮಾನ್ಯವಾಗಿ ಟ್ರೋಲ್​ ಎಂಬ ವಿಷಯ ಬಂದಾಗ ಅದು ನಟ ಅಥವಾ ನಟಿಗೆ ಹೆಚ್ಚಾಗಿ ಮೀಸಲಿರುತ್ತದೆ. ಆದ್ರೆ, ಇಲ್ಲೊಬ್ಬರು ಚಿತ್ರ ನಿರ್ದೇಶಕರು ಸ್ಟಾರ್ ಕಲಾವಿದರಿಗಿಂತಲೂ ಹೆಚ್ಚಿನ ಟ್ರೋಲ್​ಗೆ ನಾನು ಗುರಿಯಾಗಿದ್ದೆ ಎಂಬ ಸಂಗತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇದೇ ಆಗಸ್ಟ್​ 15ರಂದು ಬಹುತೇಕ ಚಿತ್ರಮಂದಿಗರಳಲ್ಲಿ ತೆರೆಕಾಣಲು ಸಜ್ಜಾಗಿರುವ ಮಾಸ್ ಮಹಾರಾಜ ರವಿತೇಜ ಅಭಿನಯದ 'ಮಿಸ್ಟರ್​ ಬಚ್ಚನ್'​ ಚಿತ್ರವನ್ನು ನಿರ್ದೇಶಿಸಿರುವ ನಿರ್ದೇಶಕ ಹರೀಶ್ ಶಂಕರ್​, ಬಹುನಿರೀಕ್ಷಿತ ಚಿತ್ರಗಳನ್ನೇ ಸಿನಿರಸಿಕರ ಮುಂದೆ ತರಲು ಸಿದ್ಧರಾಗಿದ್ದಾರೆ. ಬಾಲಿವುಡ್​ ರಿಮೇಕ್ ಆಗಿರುವ ಈ ಚಿತ್ರದ ಕುರಿತು ಒಂದಷ್ಟು ಮಾಹಿತಿಯನ್ನು ಹಂಚಿಕೊಂಡ ಹರೀಶ್​, ಒಂದು ಘಟನೆಯಿಂದ ತಾವು ಅನುಭವಿಸಿದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

"ರವಿತೇಜ ನಟನೆಯ 'ಮಿ. ಬಚ್ಚನ್' ಹಾಗೂ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ 'ಉಸ್ತಾದ್ ಭಗತ್​ ಸಿಂಗ್​' ಸಿನಿಮಾಗಳ ನಿರ್ದೇಶನದ ಜವಾಬ್ದಾರಿಯನ್ನು ನಾನೇ ಹೊತ್ತಿದ್ದೇನೆ. ಮಿ. ಬಚ್ಚನ್ ಚಿತ್ರ ಬಾಲಿವುಡ್​ನ ರೈಡ್​ ಸಿನಿಮಾದ ರಿಮೇಕ್ ಆಗಿದೆ. ಓರಿಜೀನಲ್ ಫಿಲಂಗೂ ನಮ್ಮ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶೇ.70ರಷ್ಟು ಬದಲಾವಣೆ ಮಾಡಿದ್ದೇವೆ. ಸಂಪೂರ್ಣ ಪ್ರೀತಿಮಯವಾಗಿದೆ. ಡೈಲಾಗ್ ಮತ್ತು ಹಾಡುಗಳು ನೋಡುಗರನ್ನು ಸೆಳೆಯುವುದು ಖಚಿತ" ಎಂದು ನಿರ್ದೇಶಕ ಹರೀಶ್ ಭರವಸೆ ವ್ಯಕ್ತಪಡಿಸಿದರು. ಈ ಮಧ್ಯೆ ಉಸ್ತಾದ್ ಭಗತ್​ ಸಿಂಗ್ ಚಿತ್ರಕ್ಕೆ ಎದುರಾದ ವಿರೋಧದ ಬಗ್ಗೆಯೂ ಮಾತನಾಡಿದ ಹರೀಶ್, ಯಾಕಪ್ಪಾ ಈ ಸಿನಿಮಾ ಕೈಗೆತ್ತಿಕೊಂಡೆ ಎಂಬ ಬೇಸರ ನನ್ನಲ್ಲಿ ಕಾಡಿತ್ತು ಎಂದಿದ್ದಾರೆ.

"ಪವನ್ ಕಲ್ಯಾಣ್ ನಟಿಸಲಿರುವ 'ಉಸ್ತಾದ್ ಭಗತ್ ಸಿಂಗ್' ಚಿತ್ರವನ್ನು ನಾನು ನಿರ್ದೇಶಿಸುತ್ತಿದ್ದೇನೆ. ಇದು 'ತೇರಿ' ಚಿತ್ರದ ರಿಮೇಕ್ ಎಂದಾಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ಬರಲು ಪ್ರಾರಂಭವಾಯಿತು. ಯಾವುದೇ ಕಾರಣಕ್ಕೂ ನೀವು ರಿಮೇಕ್ ಮಾಡಬೇಡಿ. ಇಲ್ಲಿಗೆ ಕೈಬಿಡಿ ಎಂದು ಬರೋಬ್ಬರಿ 2 ಲಕ್ಷ 68 ಸಾವಿರಕ್ಕೂ ಹೆಚ್ಚು ಟ್ವೀಟ್​ಗಳು ನನಗೆ ಬಂದಿದ್ದವು. ಇಷ್ಟಾದರೂ ಸಹ ನಾನು ಚಿತ್ರವನ್ನು ಅರ್ಧಕ್ಕೆ ಕೈಬಿಡಲಿಲ್ಲ. ಬದಲಿಗೆ ಮಾಡಿ, ಅದರ ಟೀಸರ್​ ಅನ್ನು ಇತ್ತೀಚೆಗಷ್ಟೇ ರಿಲೀಸ್​ ಮಾಡಿದೆ. ಇದನ್ನು ನೋಡಿದ ನಂತರ ಯಾರೆಲ್ಲಾ ನನ್ನನ್ನು ಟೀಕಿಸಿದ್ದರೋ ಅವರೇ ಕ್ಷಮಾಪಣೆ ಕೋರಿದರು. ಟ್ರೋಲ್​ಗೆ ಆಹಾರವಾದ ಮೊದಲ ನಿರ್ದೇಶಕ ಬಹುಶಃ ನಾನೇ ಇರಬಹುದು" ಎಂದು ಹರೀಶ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net