ನಾ ಬಲ್ಲೆ ಮಹಾತ್ಮ ರಾಮನನ್ನು!

Lord Rama
Published on
Pro KS Kannan
ಜೀವನವು ಯಾವಾಗ ಯಾವ ತೆರನ ತಿರುವನ್ನು ಪಡೆಯುವುದೋ ಹೇಳಲಾರೆವು. ಆಡಿದ ಮಾತನ್ನು ಬದಲಿಸಿಕೊಳ್ಳಬೇಕಾಗುವ ಸಂನಿವೇಶವು ಸಜ್ಜನರಿಗೂ ಬಂದುಬಿಡಬಹುದೆಂದು ನಿರೀಕ್ಷಿಸ ಲಾರೆವು. ಕ್ಲಿಷ್ಟಪದಗಳ ಪ್ರಯೋಗವಿಲ್ಲದ ಮಾತಾದರೂ ಅದರ ಸಾರವನ್ನು ಎಷ್ಟೋ ವೇಳೆ ಗ್ರಹಿಸಲಾರೆವು, ಇವೆಲ್ಲಕ್ಕೂ ನಿದರ್ಶನವು ರಾಮಾಯಣದ ಬಾಲಕಾಂಡದಲ್ಲಿಯೇ ದೊರೆಯುವುದು.

ತನ್ನ ಉಪಾಧ್ಯಾಯರು, ಬಾಂಧವರು, ಇವರುಗಳೊಂದಿಗೆ ದಶರಥನು ರಾಮಾದಿಗಳ ವಿವಾಹದ ಬಗ್ಗೆ ವಾರ್ತಾಲಾಪ ಮಾಡುತ್ತಿರುವ ಹೊತ್ತಿಗೇ ಅಲ್ಲಿಗೆ ಬಂದರು ವಿಶ್ವಾಮಿತ್ರಮಹರ್ಷಿಗಳು! ತನ್ನ ಯಜ್ಞದ ರಕ್ಷಣೆಗೆ ರಾಮನನ್ನು ಕಳುಹಿಸಿಕೊಡೆಂದು ಅವರು ಕೇಳಿದುದಂತೂ ದಶರಥನಿಗೆ ಅತ್ಯನಿರೀಕ್ಷಿತವೇ ಆಯಿತು: ತಾನೊಂದು ದಿಕ್ಕಿನಲ್ಲಿ ಯೋಚಿಸುತ್ತಿದ್ದರೆ, ವಿಶ್ವಾಮಿತ್ರರ ಕೋರಿಕೆಯ ದಿಕ್ಕೇ ಮತ್ತಾವುದೋ ಆಯಿತು! ಅಂತೂ ಅತ್ತ ಕರೆದುಕೊಂಡೇ ಹೋಗಿಬಿಟ್ಟರಲ್ಲಾ, ವಿಶ್ವಾಮಿತ್ರರು ಎಂದುಕೊಂಡರೆ, ಆದರಿದೋ, ಕೆಲಕಾಲದಲ್ಲೇ ಧನುರ್ಭಂಗ - ಸೀತೆಯೊಡನೆ ವಿವಾಹವೇರ್ಪಡುವ ಸುದ್ದಿಯೇ ಮುಟ್ಟಿತು, ದಶರಥನಿಗೆ! ಏನೇನು ತಿರುವುಗಳು!

ಇದಕ್ಕಿಂತಲೂ ಆಶ್ಚರ್ಯವೆಂದರೆ ದಶರಥನೇ ವಿಶ್ವಾಮಿತ್ರರ ನ್ನಾದರಿಸಿದ ವೈಖರಿ: ‘ತಾವು ಬಂದುದು ಬರಗಾಲದಲ್ಲಿ ಮಳೆ ಸುರಿದಂತೆ! ಮಕ್ಕಳಿಲ್ಲದವನಿಗೆ ಪುತ್ರೋತ್ಸವವು ಘಟಿಸಿದಂತೆ! ಇಂದಿಗೆ ನನ್ನ ಜನ್ಮ ಸಫಲವಾಯಿತು. ಮೊದಲು ರಾಜರ್ಷಿಯಾಗಿದ್ದ ತಾವು ಈಗಂತೂ ಬ್ರರ್ಹ¾ಯಾಗಿದ್ದೀರಿ! ತಮ್ಮನ್ನದೆಂತು ಆದರಿಸಲಿ! ತಮ್ಮ ಮಾತು ಅಪ್ಪಣೆಯಂತೆ.’ ಯಜ್ಞಾರ್ಥಕ್ಕಾಗಿ ಹತ್ತು

ದಿನದ ಮಟ್ಟಿಗೆ ರಾಮನನ್ನು ಕಳುಹಿಸಿ
ಕೊಡೆಂದು ವಿಶ್ವಾಮಿತ್ರರು ಕೇಳುತ್ತಿದ್ದಂತೆಯೇ

ಬೆಚ್ಚಿದ, ದಶರಥ: ‘ರಾಮನಿಗಿನ್ನೂ ಹದಿ ನಾರೂ ತುಂಬಿಲ್ಲದ ಎಳೆಯ! ವಿದ್ಯೆಯಿಲ್ಲ, ಅಸ್ತ್ರಬಲವಿಲ್ಲ, ಯುದ್ಧಪರಿಚಯವಿಲ್ಲ. ಆತನೆಂತು ಹೋರುವ? ಆತನನ್ನು ಬಿಟ್ಟು ಕ್ಷಣವೂ ಇರಲಾರೆ.’ ದಶರಥನೇನು ದುರ್ಜನನೇ? ಆದರೂ ಮೊದಲಿತ್ತ ಮಾತೇನು? ಈಗಿತ್ತ ಉತ್ತರವೇನು? ವ್ಯಾಮೋಹವೆಂಬುದೆಂತು ಪ್ರಬಲ!

ವಿಶ್ವಾಮಿತ್ರರು ಹೇಳಿದ್ದೇನು? ‘ಮಾರೀಚ-ಸುಬಾಹುಗಳೆಂಬ ರಾಕ್ಷಸರಿಬ್ಬರು ಯಜ್ಞವೇದಿಕೆಯ ಮೇಲೆ ರಕ್ತಮಾಂಸಗಳನ್ನು ಸುರಿದು ನನ್ನ ಯಜ್ಞಕ್ಕೆ ವಿಘ್ನವೊಡ್ಡುತ್ತಿದ್ದಾರೆ. ವ್ರತಸ್ಥನಾಗಿರುವ ಕಾರಣ ನಾನು ಕ್ರೋಧಗೊಳ್ಳಲಾರೆ, ಶಾಪವೀಯಲಾರೆ. ರಾಮನು ದಿವ್ಯ ತೇಜಸ್ಸಂಪನ್ನ; ಜೊತೆಗೆ ನನ್ನ ರಕ್ಷಣೆಯಿದ್ದೇ ಇದೆ. ಅವರನ್ನವನು ಕೊಲ್ಲುವವನೇ ಸರಿ. ರಾಮನಲ್ಲದೆ ಮತ್ತಾರೂ ಅವರಿಬ್ಬರನ್ನು ಕೊಲ್ಲಲಾರರು.’ ಹೀಗೆ ಹೇಳುತ್ತಿದ್ದ ವಿಶ್ವಾಮಿತ್ರರಿಗೆ ದಶರಥನ ಚಹರೆಯಲ್ಲಿ ಬದಲಾವಣೆಗಳು ಕಂಡವೇ ಸರಿ! ‘ರಾಜನೇ, ಪುತ್ರಸ್ನೇಹವಿಲ್ಲಿ ಬೇಡ. ಆ ರಾಕ್ಷಸರಿಬ್ಬರೂ ಹತರಾದರೆಂದು ತಿಳಿ. ರಾಮನು ಮಹಾತ್ಮನೆಂಬುದನ್ನು ಬಲ್ಲೆ (ಅಹಂ ವೇದ್ಮಿ ಮಹಾತ್ಮಾನಂ). ಮಹಾತೇಜಶ್ಶಾಲಿಗಳಾದ ವಸಿಷ್ಠರೂ ಬಲ್ಲರು. ತಪಸ್ಸಿನಲ್ಲಿ ನೆಲೆಗೊಂಡ ಈ ಇತರರೂ ಬಲ್ಲರು’ - ಎಂದರು. ಕೊನೆಗೆ, ‘ನಿನ್ನ ಮಂತ್ರಿಗಳು - ವಸಿಷ್ಠಾದಿಗಳು - ಅನುಮತಿಯಿತ್ತಲ್ಲಿ ಕಳುಹಿಸಿಕೊಡು’ - ಎಂದರು.

ರಾಮನು ಮಹಾತ್ಮನೆಂಬುದನ್ನು ನಾ ಬಲ್ಲೆ, ಮಹಾತೇಜಸ್ವಿಗಳಾದ ವಸಿಷ್ಠರೂ, ಇತರ ತಪೋನಿಷ್ಠರೂ ಅರಿತಿದ್ದಾರೆ - ಎಂಬ ಅವರ ಮಾತಿನಲ್ಲಿ ಏನೂ ಕ್ಲಿಷ್ಟಪದವೇ ಇಲ್ಲ. ಆದರೆ ದಶರಥನಿಗೆ ವಿಶ್ವಾಮಿತ್ರರ ಆಶಯವು ಅರ್ಥವಾಗಲೇ ಇಲ್ಲ! ಶಬ್ದ-ಶಬ್ದಾರ್ಥಗಳು ಗೊತ್ತಾದ ಮಾತ್ರಕ್ಕೆ, ಆಶಯ-ತಾತ್ಪರ್ಯಗಳು ಗೊತ್ತಾಗಿಬಿಡತಕ್ಕವೇ?

ಈ ಮಾತುಗಳನ್ನು ವಿಶ್ವಾಮಿತ್ರರು ದಶರಥನಿಗೆ ಗುಟ್ಟಾಗಿ ಹೇಳಿರುವರೆಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದಾರೆ: ‘ರಾಮನು ವಿಷ್ಣುವಿನ ಅವತಾರವೆಂಬುದು ಮರೆಯಲ್ಲಿ ಬೆಳಗುವ ಸತ್ಯ. ಅದನ್ನು ನೇರವಾಗಿ ಹೊರಬಿಡುವುದರಲ್ಲಿ ಲೌಕಿಕವಾದ ತೊಡಕಿದೆ: ಬ್ರಹ್ಮವರಾನುಸಾರ ಮಾನುಷಭಾವಕ್ಕೆ ಅನುಗುಣವಾದ ವ್ಯವಹಾರ ನಡೆಯಬೇಕು. ಕಾರ್ಯವಾಗುವವರೆಗೂ ಗುಟ್ಟೊಡೆಯಬಾರದು.’ ಮಾರ್ವಿುಕವಾದ ಮಾತುಗಳಿವು. ವಸಿಷ್ಠರು ಹೇಳಿದ ಮೇಲೇ, ತನ್ನ ಮನಸ್ಸನ್ನು ಬದಲಾಯಿಸಿ ರಾಮಲಕ್ಷ್ಮಣರನ್ನು ದಶರಥನು ಕಳುಹಿಸಿಕೊಟ್ಟದ್ದು.

ವಸಿಷ್ಠರು ಹೇಳಿದ್ದೇನು? ‘ಮೊದಲು ಮಾತನ್ನಿತ್ತು ಈಗಿಲ್ಲವೆನ್ನುವೆಯಾ? ರಘುಕುಲಕ್ಕಿದು ಸಲ್ಲದು. ರಾಮನನ್ನೇನೆಂದುಕೊಂಡೆ? ಈತ ಧರ್ಮವೇ ಮೈದಾಳಿದವ. ವೀರ್ಯವಂತರಲ್ಲಿ ಶ್ರೇಷ್ಠ. ಬುದ್ಧಿ-ತಪಸ್ಸುಗಳಲ್ಲಿ ಸಾಟಿಯಿಲ್ಲದವ, ರಾಮನಿಗೆ ತಿಳಿದಿರುವ ಅಸ್ತ್ರಗಳನ್ನು ಇತರರರಿಯರು. ವಿಶ್ವಾಮಿತ್ರನು ನಿನ್ನ ಮಕ್ಕಳ ಹಿತಕ್ಕಾಗಿಯೇ ಬಂದಿರುವನು’ - ಎಂದೆಲ್ಲಾ ಹೇಳಿದ ಮೇಲೇ ದಶರಥನೊಪ್ಪಿದ್ದು.

ನಾನು ಬಲ್ಲೆನೆಂದು ವಿಶ್ವಾಮಿತ್ರರು ಹೇಳುವಾಗ, ಅವರ ತಪೋಮಹಿಮೆಯು ದಶರಥನಿಗೆ ಅರ್ಥವಾಗಲಿಲ್ಲ. ರಾಮನು ಸತ್ಯಪರಾಕ್ರಮನೆಂದಾಗ ರಾಮನ ಸತ್ತ್ವಮಹಿಮೆ ಅರ್ಥವಾಗಲಿಲ್ಲ. ವಸಿಷ್ಠ- ವಿಶ್ವಾಮಿತ್ರರಲ್ಲಿ ಕೆಲಕಾಲ ದ್ವೇಷವಿತ್ತಾದರೂ, ಅವರೂ ಬಲ್ಲರೆಂದರೂ, ದಶರಥನಿಗದು ಅರ್ಥವಾಗಲಿಲ್ಲ. ಇನ್ನಿತರ ತಪೋನಿಷ್ಠರೂ ಬಲ್ಲರೆಂದಾಗಲಾದರೂ ರಾಮನೆಂದರೆ ತಪೋವೇದ್ಯತತ್ತ್ವವೆಂಬುದು ದಶರಥನಿಗೆ ಸ್ಪುರಿಸಬಹುದಾಗಿತ್ತು. ಆಗಲೂ ಗೊತ್ತಾಗಲಿಲ್ಲ!

ಹೀಗೆ, ತಿಳಿಯಾದ ಮಾತು ಸಹ ತಕ್ಕ ಪೂರ್ವಭಾವಿ ತಿಳಿವಳಿಕೆಯಿಲ್ಲದಿದ್ದಾಗ ತಿಳಿಯುವುದಿಲ್ಲವಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net