

Techie : ಮೀಟಿಂಗ್ ಮುಗಿದ ಕೆಲವೇ ಕ್ಷಣಗಳಲ್ಲಿ ತಮ್ಮ ಕಚೇರಿಯ ಕಟ್ಟಡದಿಂದ ಹಾರಿ ಯುವ ಟೆಕ್ಕಿಯೊಬ್ಬ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಸೋಮವಾರ (ಜುಲೈ 28) ಬೆಳಗ್ಗೆ ಪುಣೆಯಲ್ಲಿ ನಡೆದಿದೆ.
ಮೃತ ಟೆಕ್ಕಿಯನ್ನು ಪಿಯೂಷ್ ಅಶೋಕ್ ಕವಡೆ (23) ಎಂದು ಗುರುತಿಸಲಾಗಿದೆ. ಪುಣೆಯ ಹಿಂಜೆವಾಡಿ ಐಟಿ ಪಾರ್ಕ್‌ನಲ್ಲಿರುವ ತನ್ನ ಕಚೇರಿ ಕಟ್ಟಡದ ಏಳನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಾನೆ. ಪೊಲೀಸರ ಪ್ರಕಾರ, ಈ ಘಟನೆ ಬೆಳಗ್ಗೆ 10.30ರ ಸುಮಾರಿಗೆ ಹಿಂಜೆವಾಡಿ ಹಂತ ಒಂದರಲ್ಲಿರುವ ಅಟ್ಲಾಸ್ ಕಾಪ್ಕೊದಲ್ಲಿ ಸಂಭವಿಸಿದೆ. ಇಲ್ಲಿ ಪಿಯೂಷ್ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಉದ್ಯೋಗದಲ್ಲಿದ್ದರು.
ಪಿಯೂಷ್ ಕಚೇರಿಯ ಮೀಟಿಂಗ್ನಲ್ಲಿ ಭಾಗವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಕ್ಷಮೆಯಾಚಿಸಿದರು ಎಂದು ವರದಿಯಾಗಿದೆ. ಮೀಟಿಂಗ್ ಮುಗಿದ ಕೆಲವೇ ಕ್ಷಣಗಳಲ್ಲಿ ಕಟ್ಟಡದ ಏಳನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಸಹೋದ್ಯೋಗಿಗಳನ್ನು ಆಘಾತಕ್ಕೆ ದೂಡಿದೆ.
ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ನಾನು ಜೀವನದಲ್ಲಿ ತುಂಬಾ ವಿಫಲನಾಗಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾನೆ. ಅಲ್ಲದೆ, ತನ್ನ ತಂದೆಗೆ ಬರೆದ ಸಂದೇಶದಲ್ಲಿ, ನಿಮ್ಮ ಮಗನಾಗಲು ನಾನು ಅನರ್ಹನೆಂದು ಭಾವಿಸಿದ್ದೇನೆ ಮತ್ತು ನನ್ನ ಈ ಕೃತ್ಯಕ್ಕಾಗಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪುಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಪಾಂಡ್ರೆ ಮಾತನಾಡಿದ್ದು, ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಪಿಯೂಷ್ ಕವಡೆ ಮಹಾರಾಷ್ಟ್ರದ ನಾಸಿಕ್ ಮೂಲದವರು. ಡೆತ್ನೋಟ್ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಅಥವಾ ಇತರ ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸದಿದ್ದರೂ, ಹಿಂಜೆವಾಡಿ ಪೊಲೀಸರು ಈ ದುಡುಕಿನ ನಿರ್ಧಾರದ ಹಿಂದಿನ ಪ್ರಚೋದನೆಯನ್ನು ಪತ್ತೆಹಚ್ಚಲು ಎಲ್ಲಾ ಸಂಭಾವ್ಯ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)