

Darshan Fans : ನಟಿ ರಮ್ಯಾ ಅವರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ ಎಂದು ನಟ ದರ್ಶನ್ ಅಭಿಮಾನಿಗಳ ಸಂಘ ಫೇಸ್ಬುಕ್ ಮೂಲಕ ಮನವಿ ಮಾಡಿದೆ.
ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ. ಅಷ್ಟೇ ಅಲ್ಲ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಕೊಡಬೇಡಿ, ಯಾರಿಗೂ ಮೆಸೇಜ್ ಕೂಡ ಮಾಡಬೇಡಿ, ಪ್ರಚಾರಕ್ಕೇ ಆಗಲಿ ಅಥವಾ ಹುನ್ನಾರವೇ ಮಾಡಲಿ, ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂಬುದಕ್ಕೆ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳೇ ಸಾಕ್ಷಿ. ಈ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಮೆಟ್ಟಿಲುಗಳಾಗಲಿ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಹೆಸರಿನ ಫೇಸ್ಬುಕ್ ಖಾತೆಯಿಂದ ಅಭಿಮಾನಿಗಳಲ್ಲಿ ಮನವಿ ಮಾಡಲಾಗಿದೆ.
ನಿನ್ನೆಯಷ್ಟೇ ರಮ್ಯಾ ಅವರು ಎಲ್ಲ ಡಿ ಬಾಸ್ (ದರ್ಶನ್) ಅಭಿಮಾನಿಗಳೇ ನನ್ನ ಇನ್ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್ಗಳೇ ಸಾಕ್ಷಿ ಎಂದು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದರು. ರಮ್ಯಾ ಅವರು ಆ ರೀತಿ ಸ್ಟೋರಿ ಪೋಸ್ಟ್ ಮಾಡುವುದಕ್ಕೆ ಕಾರಣ ಏನೆಂದರೆ, ಅನೇಕ ದರ್ಶನ್ ಅಭಿಮಾನಿಗಳು ರಮ್ಯಾ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿದ ಸ್ಕ್ರೀನ್ಶಾಟ್ಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ ಅವರು ಶೇರ್ ಮಾಡಿಕೊಂಡರು. ದರ್ಶನ್ ಅಭಿಮಾನಿಗಳು ಎಷ್ಟು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು ಅಂದರೆ, ಅದನ್ನು ಊಹಿಸಲು ಸಾಧ್ಯವಿಲ್ಲ. ಇದರಿಂದ ಆಕ್ರೋಶಗೊಂಡಿರುವ ರಮ್ಯಾ, ಇದೀಗ ದೂರು ನೀಡಲು ಮುಂದಾಗಿದ್ದಾರೆ.
ತಮ್ಮ ವಕೀಲರೊಂದಿಗೆ ಚರ್ಚೆ ಮಾಡಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ನಟಿ ರಮ್ಯಾ ಅವರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದು, ರಮ್ಯಾ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ, ಸುಮೊಟೋ ಪ್ರಕರಣ ದಾಖಲಿಸಲು ಅವಕಾಶವಿದ್ದರೆ ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಶನ್ ಅಭಿಮಾನಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ರಮ್ಯಾ ಅವರು ಹೇಳಿದಂತೆ ದೂರು ದಾಖಲಿಸಿದರೆ, ಕಾಮೆಂಟ್ ಮಾಡಿದ ಕಡಿಗೇಡಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಇಂತಹ ಕಾಮೆಂಟ್ ಮಾಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜುಲೈ 24ರಂದು ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ದರ್ಶನ್ಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡ ನಟಿ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಮುಗಿಬಿದ್ದಿದ್ದಾರೆ.