ಅವರು ಒಂಟಿಯಲ್ಲ, ನಾನೂ ಇದ್ದೇನೆ ಅವರ ಜತೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲ್ಲ ಎಂದು ಅಬ್ಬರಿಸಿದ ಕಾಂಗ್ರೆಸ್ ಟ್ರಬಲ್​ ಶೂಟರ್ ಡಿಕೆಶಿ!

DKShivakumar 18 MAR 20
Published on

ಬೆಂಗಳೂರು: ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರದ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬುಧವಾರ ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿರುವ ಅಲ್ಲಿನ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೋಟೆಲ್ ಮುಂಭಾಗದಲ್ಲಿ ಧರಣಿ ಕುಳಿತ ಕಾರಣ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಿಗೇ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಹೆಸರುಗಳಿಸಿರುವ ಡಿಕೆಶಿವಕುಮಾರ್ ಅವರು ಒಬ್ಬಂಟಿಯಲ್ಲ, ನಾನೂ ಇದ್ದೇನೆ ಅವರ ಜತೆಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಬ್ಬರಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಶಾಸಕರು ದೂರ ಉಳಿದ ಕಾರಣ ಕಮಲನಾಥ್ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಶತಾಯಗತಾಯ ಭಿನ್ನಮತೀಯ ಶಾಸಕರನ್ನು ವಾಪಸ್ ಕರೆದೊಯ್ಯುವ ಪ್ರಯತ್ನ ಮುಂದುವರಿದಿದೆ. ಇದರ ಭಾಗವಾಗಿ ದಿಗ್ವಿಜಯ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ. ಆದರೆ, ಶಾಸಕರ ಭೇಟಿಗೆ ಅವಕಾಶ ಸಿಗದ ಕಾರಣ ಅವರು ಶಾಸಕರಿದ್ದ ಹೋಟೆಲ್ ಎದುರೇ ಧರಣಿ ಕುಳಿತಿದ್ದರು. ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದ ಪೊಲೀಸರು ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಿರಶನ ಸತ್ಯಾಗ್ರಹಕ್ಕೆ ಮುಂದಾಗಿರುವ ಸಿಂಗ್ ಅವರ ಮನವೊಲಿಕೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡುತ್ತಿದೆ. ನಮಗೆ ನಮ್ಮದೇ ಆದ ರಾಜಕೀಯ ತಂತ್ರಗಾರಿಕೆಗಳಿವೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರು ಒಂಟಿಯಲ್ಲ. ನಾನೂ ಇದ್ದೇನೆ ಇಲ್ಲಿ. ಅವರಿಗೆ ನನ್ನ ಬೆಂಬಲವಿದೆ. ಆದರೆ, ಕರ್ನಾಟಕದಲ್ಲ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ಮಾಡಲಾರೆ ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net