

ನವದೆಹಲಿ: ಬಾಲಿವುಡ್ನ ಚೆಲುವೆ, ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಇದೀಗ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿದ್ದು, ಭರ್ಜರಿ ಮತಬೇಟೆಗೆ ಸಕಲ ತಯಾರಿ ನಡೆಸುತ್ತಿದ್ದಾರೆ. ಇನ್ನು ಈ ಮಧ್ಯೆ ತನ್ನ ವಿರುದ್ಧ ಕೇಳಿಬಂದ ಆರೋಪಕ್ಕೆ ಇದೀಗ ನಟಿ ಟ್ವೀಟ್ (ಇಂದಿನ ಎಕ್ಸ್) ಮೂಲಕ ತಿರುಗೇಟು ನೀಡಿದ್ದಾರೆ.
ನಾನು ಗೋಮಾಂಸ ಅಥವಾ ಇತರ ಯಾವುದೇ ಕೆಂಪು ರೀತಿಯ ಮಾಂಸವನ್ನು ಸೇವಿಸುವುದಿಲ್ಲ. ಇದೆಲ್ಲವೂ ನನ್ನ ವಿರುದ್ಧ ಕೇಳಿಬರುತ್ತಿರುವ ಆಧಾರರಹಿತ ವದಂತಿಗಳು. ಈ ರೀತಿ ಅಪಪ್ರಚಾರ ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ. ಇಂತಹ ತಂತ್ರಗಳು ನನ್ನ ಬದುಕಿಗೆ ಕಳಂಕ ತರಲು ಸಾಧ್ಯವಿಲ್ಲ. ನನ್ನ ಜನರಿಗೆ ನಾನೇನು ಎಂಬುದು ಗೊತ್ತಿದೆ. ನಾನು ಹೆಮ್ಮೆಯ ಹಿಂದೂ, ಜೈ ಶ್ರೀ ರಾಮ್ ಎಂದು ಬರೆದು ಹಂಚಿಕೊಂಡಿದ್ದಾರೆ.
ಸದ್ಯ ನಟಿ ಕಂಗನಾ ಮಾಡಿದ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿದ್ದು, ಕೆಲವರು ನಟಿಯ ಪರ ಬ್ಯಾಟ್ ಬೀಸಿದರೆ, ಇನ್ನು ಕೆಲವರು ಆಕೆಯನ್ನು ಲೇವಡಿ ಮಾಡಿದ್ದಾರೆ. ಇದೇ ಏಪ್ರಿಲ್ 5ರಂದು ಕಂಗನಾ ರಣಾವತ್ ವಿರುದ್ಧ ಆರೋಪ ಎಸಗಿದ್ದ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್, ಆಕೆ ಗೋಮಾಂಸ ಇಷ್ಟಪಡುತ್ತಾರೆ ಮತ್ತು ತಿನ್ನುತ್ತಾರೆ ಎಂದು ಬರೆದಿದ್ದರು. ಈಗ ಬಿಜೆಪಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ. ಎಲ್ಲಾ ಭ್ರಷ್ಟ ನಾಯಕರನ್ನು ಕಮಲ ಸ್ವಾಗತಿಸುತ್ತಿದೆ ಎಂದು ವಡೆತ್ತಿವಾರ್ ಸಾರ್ವಜನಿಕ ರ್ಯಾಲಿಯಲ್ಲಿ ತಿಳಿಸಿದ್ದರು.
ಸದ್ಯ ವಿಜಯ್ ವಾಡೆಟ್ಟಿವಾರ್ ಹೇಳಿಕೆಗೆ ಕಂಗನಾ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿರುವ ಕಂಗನಾ, ತಮ್ಮ ಮೊದಲ ಗೆಲುವಿಗಾಗಿ ಭಾರೀ ಕಸರತ್ತು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ,(ಏಜೆನ್ಸೀಸ್).