ರಷ್ಯಾದಲ್ಲಿ ಹೈದರಾಬಾದ್ ಯುವಕ ಸಾವು

Afsan
Published on

ನವದೆಹಲಿ: ರಷ್ಯಾದ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ನಂತರ ಯೂಕ್ರೇನ್ ವಿರುದ್ಧದ ಯುದ್ಧ ದಲ್ಲಿ ನಿಯೋಜನೆ ಮಾಡಲಾಗಿದ್ದ ಹೈದರಾಬಾದ್​ನ 30 ವರ್ಷದ ವ್ಯಕ್ತಿಯೊಬ್ಬ ಯುದ್ಧಭೂಮಿಯಲ್ಲಿ ಮೃತಪಟ್ಟಿದ್ದಾನೆಂದು ವರದಿಯಾಗಿದೆ. ಈತನನ್ನು ಮಹಮದ್ ಅಫ್ಸಾನ್ ಎಂದು ಗುರುತಿಸಲಾಗಿದೆ.

ಈತ ಹೇಗೆ ರಷ್ಯಾದ ವಂಚನೆಯ ಬಲೆಗೆ ಬಿದ್ದನೆಂಬುದು ಗೊತ್ತಿಲ್ಲ ಎಂಬುದಾಗಿ ಕುಟುಂಬಸ್ಥರು ಕೆಲವು ದಿನಗಳ ಹಿಂದೆ ಮಾಧ್ಯಮದವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದರೊಂದಿಗೆ, ರಷ್ಯಾ-ಯೂಕ್ರೇನ್ ಸಮರದಲ್ಲಿ ಈ ರೀತಿಯಾಗಿ ಬಲಿಯಾದವರ ಪಟ್ಟಿಗೆ ಇನ್ನೊಬ್ಬ ಭಾರತೀಯನ ಸೇರ್ಪಡೆಯಾದಂತಾಗಿದೆ. ‘ಅವರನ್ನು ವಂಚಿಸಲಾಗಿದೆ. ಅವರು ಮಾಸ್ಕೋದಲ್ಲಿ ಮಾತ್ರವೇ ಕೆಲಸ ಮಾಡಲಿದ್ದಾರೆ ಎಂದು ಏಜೆಂಟ್ ಹೇಳಿದ್ದ. ಆದರೆ ಅವರಿಗೆ 15 ದಿನಗಳ ತರಬೇತಿ ನೀಡಿ ಯೂಕ್ರೇನ್​ನಲ್ಲಿ ಬಿಟ್ಟು ಯುದ್ಧದಲ್ಲಿ ಭಾಗವಹಿಸುತ್ತಿರುವ ರಷ್ಯಾ ಯೋಧರೊಂದಿಗೆ ಉಳಿದುಕೊಳ್ಳುವಂತೆ ತಿಳಿಸಲಾಯಿತು’ ಎಂದು ಮೃತ ಅಫ್ಸಾನ್​ನ ಸೋದರ ಮಹಮದ್ ಇಮ್ರಾನ್ ಹೇಳಿದ್ದಾರೆ. ಅಫ್ಸಾನ್ ಕಳೆದ ವರ್ಷ ನವೆಂಬರ್​ನಲ್ಲಿ ಮಾಸ್ಕೋಗೆ ತೆರಳಿದ್ದ.

ಸೇಲ್ಸ್​ಮ್ಯಾನ್: ಅಫ್ಸಾನ್ ಹೈದರಾ ಬಾದ್​ನ ಬಟ್ಟೆ ಶೋರೂಮ್ಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾದಲ್ಲಿ ಮಾಸಿಕ 45,000 ರೂ. ವೇತನದ ಆಮಿಷ ಒಡ್ಡಲಾಗಿತ್ತು. ಕ್ರಮೇಣ ಅದು 1.5 ಲಕ್ಷಕ್ಕೆ ಏರಲಿದೆ ಎಂದೂ ಹೇಳಲಾಗಿತ್ತು. ರಷ್ಯಾ- ಯೂಕ್ರೇನ್ ಗಡಿಯಿಂದ ಡಿಸೆಂಬರ್ 31ರಂದು ಅಫ್ಸಾನ್ ಕೊನೇ ಬಾರಿ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿದ್ದ.

ಭಾರತೀಯರ ವಿಡಿಯೋ ಬಹಿರಂಗ: ರಷ್ಯಾ ಸೇನೆಯ ಬೆಂಬಲಿಗ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸುಮಾರು 20 ಭಾರತೀಯರನ್ನು ಆದಷ್ಟು ಬೇಗನೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಗರಿಷ್ಠ ಪ್ರಯತ್ನ ಮಾಡುವುದಾಗಿ ವಿದೇಶಾಂಗ ಸಚಿವಾಲಯ ಕೆಲವು ದಿನಗಳ ಹಿಂದೆ ಹೇಳಿತ್ತು. ಆದರೆ, ಅದರ ಬೆನ್ನಲ್ಲೇ ಏಳು ಭಾರತೀಯರ ಗುಂಪೊಂದು ವಿಡಿಯೋ ದೃಶ್ಯ ಕಳಿಸಿದ್ದು ತಮ್ಮನ್ನು ಯೂಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಬಲವಂತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net