'ಮೆಟ್ರೋ, ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಫ್ರೀ ನೀರು, ಕರೆಂಟ್...​' ಬಿಜೆಪಿಯ ಭರವಸೆ

bjp2
Published on

ಹೈದರಾಬಾದ್​: ತೆಲಂಗಾಣದ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಟಿಆರ್​ಎಸ್​ ಮತ್ತು ಬಿಜೆಪಿ ಪಕ್ಷಗಳು ಜನರಿಗೆ ಭಾರಿ ಭರವಸೆಗಳನ್ನು ನೀಡಲಾರಂಭಿಸಿವೆ. ಎರಡೂ ಪ್ರಮುಖ ಪಕ್ಷಗಳ ವತಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಭರಪೂರ ಕೊಡುಗೆಗಳನ್ನು ಜನರ ಮುಂದಿಡಲಾಗಿದೆ.

ಬುಧವಾರದಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಟಿಆರ್​ಎಸ್​ ಪಕ್ಷವು, ನಗರದ ಜನರಿಗೆ ಉಚಿತ ನೀರು ಪೂರೈಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈಗ ಅದಕ್ಕಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಉಚಿತ ನೀರು, ಉಚಿತ ವಿದ್ಯುತ್​ ಮತ್ತು ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಪ್ರಯಾಣವನ್ನು ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

ನಗರದಲ್ಲಿ 100 ಯುನಿಟ್​ ತನಕ ಉಚಿತ ಕರೆಂಟ್​, ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ನೀರು ಪೂರೈಕೆ ಇದು ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶ. ಇದರ ಜತೆಯಲ್ಲಿ ಪ್ರವಾಹದಿಂದ ತೊಂದರೆಗೊಳಗಾದ ಕುಟುಂಬಕ್ಕೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿಯೂ ಹೇಳಲಾಗಿದೆ. ಪ್ರತಿ ವರ್ಷ ಮೂರು ಹೊಸ ಮಹಿಳಾ ಪೊಲೀಸ್​ ಠಾಣೆ ನಿರ್ಮಾಣ, ಪ್ರತಿ ಕಿಲೋ ಮೀಟರ್​ಗೆ ಒಂದರಂತೆ ಮಹಿಳಾ ಶೌಚಾಲಯ, ಆನ್​ಲೈನ್ ಶಿಕ್ಷಣಕ್ಕೆ ಸಹಾಯವಾಗಲೆಂದು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಟ್ಯಾಬ್ಲೆಟ್​ ನೀಡುವುದಾಗಿ ಬಿಜೆಪಿ ತಿಳಿಸಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net