ನನ್​​ ಹೆಂಡ್ತಿ ಹೊಡಿತಾಳೆ ದಯವಿಟ್ಟು ನನ್ನನ್ನು ಕಾಪಾಡಿ! ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಇಂಗ್ಲಿಷ್​ ಪ್ರಾಧ್ಯಾಪಕ

Hyd Lecturer
Published on

ಹೈದರಾಬಾದ್​: ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು. ಗಂಡ ಮತ್ತು ಅತ್ತೆಯ ಕೈಯಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರನ್ನು ರಕ್ಷಿಸಲು ಸರ್ಕಾರಗಳು ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನುಗಳನ್ನು ಪರಿಚಯಿಸಿವೆ. ಆದರೆ ಇಂದಿನ ಕಾಲಘಟ್ಟದಲ್ಲಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಕೌಟುಂಬಿಕ ದೌರ್ಜನ್ಯದ ಬಲಿಪಶುಗಳು ಹೆಚ್ಚಾಗಿ ಪುರುಷರು ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿಯಾಗಿದೆ. ಹೆಂಡತಿ ಮತ್ತು ಆಕೆಯ ಪಾಲಕರ ಕೈಯಲ್ಲಿ ಸಿಲುಕಿ ನರಳುತ್ತಿರುವ ಪುರುಷರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬಳು ತನ್ನ ಪತಿಯನ್ನು ಹಗ್ಗದಿಂದ ಕಟ್ಟಿ, ಚಿತ್ರಹಿಂಸೆ ನೀಡಿದ ವಿಡಿಯೋ ದೇಶಾದ್ಯಂತ ವೈರಲ್ ಆಗಿ, ಬಹಳ ಚರ್ಚೆಗೀಡಾಯಿತು. ಇದೀಗ ಮತ್ತೊಬ್ಬ ವ್ಯಕ್ತಿ ತನ್ನ ಪತ್ನಿಯ ಕಿರುಕುಳವನ್ನು ತಾಳಲಾರದೇ ಮಾಧ್ಯಮಗಳ ಮುಂದೆ ಬಂದಿದ್ದಾನೆ. ಈ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ನನ್ನ ಹೆಂಡತಿ ನನಗೆ ಹೊಡೆಯುತ್ತಾಳೆ ಮತ್ತು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ದಯವಿಟ್ಟು ನನ್ನನ್ನು ಕಾಪಾಡಿ... ಈ ವಿಚಾರದಲ್ಲಿ ಪೋಲೀಸರು ಕೂಡ ನನಗೆ ಸಹಾಯ ಮಾಡುತ್ತಿಲ್ಲ. ಪತ್ನಿಯಿಂದ ತನಗೆ ಹಾಗೂ ಪಾಲಕರಿಗೆ ಅಪಾಯವಿದೆ ಎಂದು ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಮಾಧ್ಯಮಗಳ ಮೊರೆ ಹೋಗಿದ್ದಾರೆ.

ಆಂಧ್ರಪ್ರದೇಶದ ರಾಜೋಲು ಪ್ರದೇಶದ ತೆಮುಜಿಯಾನ್ ಎಂಬ ವ್ಯಕ್ತಿ ಏಳು ವರ್ಷಗಳ ಹಿಂದೆ ಅಮಲಾಪುರಂನ ಲಕ್ಷ್ಮಿ ಗೌತಮಿಯನ್ನು ವಿವಾಹವಾಗಿದ್ದರು. ಪ್ರಸ್ತುತ ತೆಮುಜಿಯನ್ ಅವರು ಮಲ್ಲಾರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ಅಲ್ವಾಲ್‌ನಲ್ಲಿ ನೆಲೆಸಿದ್ದಾರೆ. ಅವರಿಗೆ ಐದು ವರ್ಷದ ಮಗನೂ ಇದ್ದಾನೆ. ಆದರೆ ಮದುವೆಯಾದ ದಿನದಿಂದಲೂ ಪತ್ನಿ ವಿನಾಕಾರಣ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ತೆಮುಜಿಯಾನ್​ ಆರೋಪ ಮಾಡಿದ್ದಾರೆ. ಈ ಬಗ್ಗೆ ಊರಿನವರ ಸಮ್ಮುಖದಲ್ಲಿ ಪಂಚಾಯತಿಯಲ್ಲಿ ಮಾತನಾಡಿದರೂ ಆಕೆಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದಿದ್ದಾರೆ. ಇತ್ತೀಚೆಗೆ, ನನ್ನನ್ನು ಕೊಲ್ಲಲು ಚಾಕುವಿನಿಂದ ದಾಳಿ ಮಾಡಿದ್ದಾಳೆ ಎಂದು ಹೇಳುವಾಗ ತೆಮುಜಿಯನ್​ ಕಣ್ಣೀರು ಸುರಿಸಿದರು.

ಪತ್ನಿಯ ವರ್ತನೆ ಬಗ್ಗೆ ಸ್ಥಳೀಯ ಅಲ್ವಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಹಾಯಕತೆ ಹೊರಹಾಕಿದ ತೆಮುಜಿಯನ್​, ಸಂತ್ರಸ್ತರ ವಿಷಯದಲ್ಲಿ ಮಹಿಳೆ ಮತ್ತು ಪುರುಷರ ನಡುವೆ ವ್ಯತ್ಯಾಸವಿದೆಯೇ? ಮಹಿಳೆಯರಿಗೊಂದು ಮತ್ತು ಪುರುಷರಿಗೊಂದು ನ್ಯಾಯವಿದೆಯೇ? ನೋವು ಎಲ್ಲರಿಗೂ ಒಂದೇ ಆಗಿರುತ್ತದೆ ಅಲ್ಲವೇ? ನಾನು ನಿನ್ನೆಯಿಂದ ಮನೆಗೆ ಹೋಗಿಲ್ಲ. ಹೋದರೆ, ಪತ್ನಿ ಮತ್ತೆ ಹಲ್ಲೆ ಮಾಡುತ್ತಾಳೆ. ಮನೆಗೆ ಹೋಗಲು ಭಯವಾಗುತ್ತಿದೆ. ಪತ್ನಿ ವಿರುದ್ಧ ಪ್ರಕರಣ ದಾಖಲಿಸಿ, ನನಗೆ ರಕ್ಷಣೆ ಕೊಡಿ ಎಂದು ತೆಮುಜಿಯನ್​ ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net