More

    ಆರ್​ಸಿಬಿ ಪ್ಲೇಆಫ್​ ಪ್ರವೇಶದ ಕ್ರೆಡಿಟ್​ ಕೊಹ್ಲಿ, ಡುಪ್ಲೆಸಿಸ್​ಗೆ ಮಾತ್ರವಲ್ಲ ಈತನಿಗೂ ಸಲ್ಲಬೇಕು!

    ಬೆಂಗಳೂರು: ಪ್ರಸಕ್ತ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಮೊದಲ 8 ಪಂದ್ಯಗಳಲ್ಲಿ 7 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದರಿಂದ ಈ ಬಾರಿಯೂ ಕಪ್​ ನಮ್ಮದಲ್ಲ ಎಂಬ ಕೂಗು ಅಭಿಮಾನಿಗಳಲ್ಲಿ ಕೇಳಿಬಂದಿತ್ತು. ಆದರೆ, ಪವಾಡವೆಂಬಂತೆ ಸತತ 6 ಗೆಲುವಿನೊಂದಿಗೆ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ನಿನ್ನೆ (ಮೇ 16) ನಡೆದ ನಾಕೌಟ್ ಕದನದಲ್ಲಿ ಸಿಎಸ್​ಕೆಯಂತಹ ಅಗ್ರ ತಂಡವನ್ನು ಸೋಲಿಸುವ ಮೂಲಕ ಫಾಫ್​ ಡುಪ್ಲೆಸಿಸ್ ಪಡೆ ಪ್ಲೇಆಫ್ ಪ್ರವೇಶಿಸಿದೆ. ಆರ್​ಸಿಬಿಯ ಈ ಸಾಧನೆಯ ಕ್ರೆಡಿಟ್​ ಕೇವಲ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​ ಡುಪ್ಲೆಸಿಸ್​ಗೆ ಮಾತ್ರವಲ್ಲ, ಈ ಆಟಗಾರನಿಗೂ ಸಲ್ಲಬೇಕು.

    ಕೊಹ್ಲಿ ಮತ್ತು ಡುಪ್ಲೆಸಿಸ್ ಪ್ಲೇಆಫ್ ಭರವಸೆಯನ್ನು ಈಡೇರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸೀಸನ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 155 ಸ್ಟ್ರೈಕ್ ರೇಟ್‌ನೊಂದಿಗೆ ಕೊಹ್ಲಿ 708 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳಿವೆ. ಈ ಮೂಲಕ ಆರೇಂಜ್​ ಕ್ಯಾಪ್​ ಒಡೆಯರಾಗಿದ್ದಾರೆ. ಬ್ಯಾಟಿಂಗ್​ ಮಾತ್ರವಲ್ಲದೆ, ಫೀಲ್ಡಿಂಗ್ ಸಮಯದಲ್ಲಿ ಎಲ್ಲ ಆಟಗಾರರಿಗೂ ಸ್ಫೂರ್ತಿ ನೀಡುತ್ತಾರೆ ಮತ್ತು ಬೌಲರ್‌ಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಾರೆ. ಡುಪ್ಲೆಸಿಸ್ ಕೂಡ 14 ಪಂದ್ಯಗಳಲ್ಲಿ 421 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆರ್​ಸಿಬಿಯ ಈ ಸಾಧನೆಗೆ ಕೊಹ್ಲಿ ಮತ್ತು ಡುಪ್ಲೆಸಿಸ್​ಗೆ ಕ್ರೆಡಿಟ್ ನೀಡುವುದರಲ್ಲಿ ತಪ್ಪೇನಿಲ್ಲ. ಆದರೆ ಆರ್​ಸಿಬಿ ಯಶಸ್ಸಿನಲ್ಲಿ ದಿನೇಶ್ ಕಾರ್ತಿಕ್​ಗೂ ಕ್ರೆಡಿಟ್​ ಸಲ್ಲಲೇಬೇಕು.

    ಏಕೆಂದರೆ, ಡಿಕೆ ಆಡಿದ ಹಲವು ಇನಿಂಗ್ಸ್​ ಆರ್​ಸಿಬಿ ಗತಿಯನ್ನೇ ಬದಲಿಸಿದವು. ಈ ಸೀಸನ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 315 ರನ್ ಗಳಿಸಿದ್ದಾರೆ. ಪಂದ್ಯದ ಕೊನೆಯ ಹಂತದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿ ಮಿಂಚಿನ ಇನ್ನಿಂಗ್ಸ್‌ನೊಂದಿಗೆ ತಂಡಕ್ಕೆ ಬೃಹತ್ ಮೊತ್ತವನ್ನು ನೀಡಿದ್ದಾರೆ. ಲೀಗ್‌ನ ಮೊದಲಾರ್ಧದಲ್ಲಿ ಡಿಕೆ ಮಿಂಚಿನ ಆಟವಾಡಿದರು. ನಿನ್ನೆಯೂ ಸಿಎಸ್​ಕೆ ವಿರುದ್ಧ 6 ಎಸೆತಗಳಲ್ಲಿ 14 ರನ್ ಗಳಿಸಿ ಇನ್ನಿಂಗ್ಸ್​ಗೆ ಉತ್ತಮ ಅಂತ್ಯ ನೀಡಿದ್ದರು. ಈ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡಿಕೆ 35 ಎಸೆತಗಳಲ್ಲಿ 83 ರನ್​ಗಳ ವಿಧ್ವಂಸಕ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಆರ್‌ಸಿಬಿ 25 ರನ್‌ಗಳಿಂದ ಸೋತಿತ್ತು.

    ಎಸ್​ಆರ್​ಎಚ್​ ವಿರುದ್ಧ ದಿನೇಶ್ ಕಾರ್ತಿಕ್ ಅವರ ವೀರೋಚಿತ ಇನ್ನಿಂಗ್ಸ್ ಬೆಂಗಳೂರು ಆಟಗಾರರಿಗೆ ಸ್ಫೂರ್ತಿಯಾಗಿತ್ತು. ಆ ಬಳಿಕ ಕೆಕೆಆರ್‌ ತಂಡದ ವಿರುದ್ಧ ಆರ್​ಸಿಬಿ 1 ರನ್‌ನಿಂದ ಸೋಲನುಭವಿಸಿತು. ಆದರೆ ನಂತರ ಆರ್​ಸಿಬಿ ಸತತ ಆರು ಗೆಲುವುಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಡಿಕೆ ತನ್ನ ಅತ್ಯುತ್ತಮ ಬ್ಯಾಟಿಂಗ್ ಮತ್ತು ಕೀಪಿಂಗ್ ಮೂಲಕ ಸಹ ಆಟಗಾರರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ತಂಡದ ಯಶಸ್ಸಿನಲ್ಲಿ ಅವರಿಗೂ ಪಾಲು ನೀಡಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಸತತ 6 ಪಂದ್ಯಗಳಲ್ಲಿ ಜಯ: ಇವರೇ ನೋಡಿ ಆರ್​ಸಿಬಿ ಯಶಸ್ಸಿನ ಹಿಂದಿರುವ ಅಗೋಚರ ಶಕ್ತಿ!

    ಈ ಒಂದು ಕ್ಷಣ ಮರುಕಳಿಸಿದ್ರೆ RCB ಕಪ್​ ಗೆಲ್ಲೋದು ತುಂಬಾ ಕಷ್ಟ! ಕೋಟ್ಯಂತರ ಅಭಿಮಾನಿಗಳಿಂದ ಪ್ರಾರ್ಥನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts