ಬಾಂಬ್ ಕಟ್ಟಿಕೊಂಡು ಬ್ಯಾಂಕ್​ಗೆ ನುಗ್ಗಿದ ಖದೀಮ: ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು!

Hyd Bomber
Published on

ಹೈದರಾಬಾದ್​: ಮುಖವಾಡ ಧರಿಸಿದ ನಾಲ್ಕೈದು ಮಂದಿ ಶಸ್ತ್ರಾಸ್ತ್ರಗಳನ್ನು ಹಿಡಿದು ಬ್ಯಾಂಕ್​ಗೆ ನುಗ್ಗಿ, ಕ್ಯಾಶಿಯರ್ ಹಣೆಗೆ ಗನ್​ ಇಟ್ಟು, ಬ್ಯಾಗ್​ಗೆ ಹಣ ತುಂಬುವಂತೆ ಬೆದರಿಕೆ ಹಾಕುವ ದೃಶ್ಯವನ್ನು ನಾವು, ನೀವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಈ ರೀತಿಯ ಘಟನೆ ನಿಜ ಜೀವನದಲ್ಲಿ ನಡೆಯುವುದು ತುಂಬಾ ವಿರಳ. ಏಕೆಂದರೆ ಇಂದಿನ ಬಲವಾದ ಟೆಕ್ನಾಲಜಿ ಅಥವಾ ಕಣ್ಗಾವಲು ವ್ಯವಸ್ಥೆ ಇಂತಹ ಕೃತ್ಯಗಳಿಗೆ ದುಸ್ವಪ್ನವಾಗಿವೆ.

ಆದಾಗ್ಯೂ ಕೆಲವು ಖದೀಮರು ಎಟಿಎಂ ಹಾಗೂ ಹಣ ತುಂಬುವ ವ್ಯಾನ್​ಗಳ ಮೇಲೆ ದಾಳಿ ಮಾಡಿರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೆ, ಬ್ಯಾಂಕ್​ನಿಂದ ಹಣ ಡ್ರಾ ಮಾಡುವ ಜನರಿಂದ ಹಣ ಸುಲಿಗೆ ಮಾಡುವುದನ್ನು ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಸಿನಿಮಾ ಶೈಲಿಯಲ್ಲಿ ಸುಲಿಗೆ ಮಾಡಲು ಬ್ಯಾಂಕ್ ಒಳಗೆ ನುಸುಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಎರಡು ಲಕ್ಷ ರೂ.ಗೆ ಬೇಡಿಕೆ

ಬಂಧಿತ ಖದೀಮನ ಹೆಸರನ್ನು ಶಿವಾಜಿ (32) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್​ ಮೂಲದ ನಿವಾಸಿ. ಈತ ತನ್ನ ಹೊಟ್ಟೆಗೆ ಬಾಂಬ್​ ಕಟ್ಟಿಕೊಂಡು ಸ್ಥಳೀಯ ಆದರ್ಶ್​ ಬ್ಯಾಂಕ್​ಗೆ ನುಗ್ಗಿದ್ದ. ಬಳಿಕ ಎರಡು ಲಕ್ಷ ರೂ. ಹಣ ನೀಡುವಂತೆ ಬ್ಯಾಂಕ್​ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ. ಒಂದು ವೇಳೆ ಹಣ ಕೊಡದೇ ಇದ್ದರೆ ಬಾಂಬ್​ ಸ್ಫೋಟಿಸುವುದಾಗಿ ಹೆದರಿಕೆ ಹಾಕಿದ. ಅದನ್ನು ನೋಡಿ ಬ್ಯಾಂಕ್​ನಲ್ಲಿದ್ದ ಗ್ರಾಹಕರು ಒಂದು ಕ್ಷಣ ಭಯಭೀತಗೊಂಡರು. ಬಳಿಕ ಬ್ಯಾಂಕ್​ನಲ್ಲಿದ್ದ ಭದ್ರತಾ ಸಿಬ್ಬಂದಿ ಹೇಗೋ ಶಿವಾಜಿಯನ್ನು ಸೆರೆಹಿಡಿದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ನಕಲಿ ಬಾಂಬ್​

ಮಾಹಿತಿ ತಿಳಿದು ಬ್ಯಾಂಕ್​ಗೆ ಆಗಮಿಸಿದ ಜೀಟಿಮೆಟ್ಲ ಠಾಣಾ ಪೊಲೀಸರು ಆತ್ಮಾಹುತಿ ಬಾಂಬರ್​ನನ್ನು ಬಂಧಿಸಿದರು. ಆರೋಪಿಯ ಬಂಧನವಾದ ಬಳಿಕ ಆತನ ಅಸಲಿ ಮುಖವಾಡ ಕಳಚಿಬಿದ್ದಿದೆ. ಶಿವಾಜಿಯ ಹೊಟ್ಟೆಯಲ್ಲಿ ಸುತ್ತಿಕೊಂಡಿದ್ದ ಬಾಂಬ್​ ನಕಲಿ ಎಂಬುದು ಬಯಲಾಗಿದೆ. ಸದ್ಯ ಪೊಲೀಸರು ಶಿವಾಜಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net