

ಹೈದರಾಬಾದ್: ಸಾಮಾಜಿಕ ಜಾಲತಾಣ ಬಳಸುವವರು ಅದರಲ್ಲೂ ಮಹಿಳೆಯರು ಒಂದೊಂದು ಹೆಜ್ಜೆಯನ್ನು ತುಂಬಾ ಹುಷಾರಾಗಿ ಇಡಬೇಕು. ಯಾವುದನ್ನು ಸತ್ಯ ಎಂದು ನಂಬುತ್ತೇವೆಯೋ ಅದರ ಹಿಂದೆ ಕರಾಳ ಮುಖವೂ ಅಡಗಿರುತ್ತದೆ. ಸ್ವಲ್ಪ ಯಾಮಾರಿದರೆ ಜೀವನವೇ ನರಕವಾಗಿಬಿಡುತ್ತದೆ. ಸೌಂದರ್ಯ ಸೋಗಿನಲ್ಲಿ ವೇಷ ಮರೆಸಿಕೊಂಡು ವಂಚಿಸುವ ವಂಚಕರ ಜಾಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಿ, ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾದ ಇಬ್ಬರು ಹುಡುಗಿಯರನ್ನು ಮೇಲೆ ಯುವಕರಿಬ್ಬರು ದಾಳಿ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸಂತ್ರಸ್ತ ಯುವತಿಯರಿಗೆ ಆರೋಪಿಗಳಿಬ್ಬರು ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಯುವತಿಯರು ಅನುಮತಿಸಿದ್ದರು. ಬಳಿಕ ಕೆಲವು ಸಮಯದವರೆಗೆ ಅವರುಗಳ ನಡುವೆ ಚಾಟಿಂಗ್ ಮುಂದುವರಿದಿತ್ತು. ಕೆಲವು ದಿನಗಳ ಬಳಿಕ ವಿಡಿಯೋ ಕಾಲ್ ಮೂಲಕ ಮಾತನಾಡಲು ಆರಂಭಿಸಿದರು. ಇದನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡ ದುಷ್ಕರ್ಮಿಗಳು, ವಿಡಿಯೋವನ್ನು ಅಶ್ಲೀಲವಾಗಿ ತಿರುಚಿ, ಯುವತಿಯರಿಗೆ ಕಳಹಿಸಿ, ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾರೆ. ಈ ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ಆರೋಪಿಗಳಿಬ್ಬರು ಬಂಧಿಸಲಾಗಿದೆ.
ಈ ಘಟನೆ ಸಂಬಂಧ ಶನಿವಾರ ಬಂಜಾರ ಹಿಲ್ಸ್ ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್ನಲ್ಲಿ ಮಾಧ್ಯಮದವರಿಗೆ ಪೊಲೀಸ್ ಆಯುಕ್ತ ಸಂದೀಪ್ ಸಂದಿಲ್ಯಾ ಮಾಹಿತಿ ನೀಡಿದರು. ಈ ಘಟನೆಯ ಸಂತ್ರಸ್ತೆಯಲ್ಲಿ ಒಬ್ಬರು ತುಂಬಾ ಖಿನ್ನತೆಗೆ ಜಾರಿದ್ದಳು. ಪರೀಕ್ಷೆಯನ್ನು ಬರೆಯಲು ಹೋಗದೆ, ಮನೆಯಲ್ಲೇ ಮೌನವಾಗಿ, ಒಬ್ಬಂಟಿಯಾಗಿ ಉಳಿದಿದ್ದಳು. ಇದನ್ನು ಗಮನಿಸಿದ ಆಕೆಯ ತಾಯಿ, ಏನಾಯಿತು ಎಂದು ಕೇಳಿದಾಗ ನಡೆದ ಎಲ್ಲ ಘಟನೆಯನ್ನು ಸಂತ್ರಸ್ತೆ ವಿವರಿಸಿದಳು ಎಂದು ಸಂದೀಪ್ ಸಂದಿಲ್ಯಾ ಹೇಳಿದರು.
ಮಗಳು ತನಗಾದ ಅನ್ಯಾಯವನ್ನು ಬಹಿರಂಗಪಡಿಸಿದ ಬೆನ್ನಲ್ಲೇ ತಾಯಿ ಸಮೀಪದ ಠಾಣೆಗೆ ತೆರಳಿ ದೂರು ದಾಖಲಿಸಿದರು. ಇನ್ನೊಂದೆಡೆ ಮತ್ತೊಬ್ಬ ಸಂತ್ರಸ್ತೆ ಸಹ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದು ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. (ಏಜೆನ್ಸೀಸ್)