

ಬೆಂಗಳೂರು: ನಿನ್ನೆ (ನ.12) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ಅವು ಯಾವುವೆಂದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮ ಬೌಲಿಂಗ್ ಮಾಡಿದ್ದು, ಅಲ್ಲದೆ, ಇಬ್ಬರೂ ಕೂಡ ಒಂದೊಂದು ವಿಕೆಟ್ ಪಡೆದಿದ್ದು. ಕೊಹ್ಲಿ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದರೆ, ರೋಹಿತ್ 4284 ದಿನಗಳ ಬಳಿಕ ಅಂದರೆ, 7 ವರ್ಷಕ್ಕೂ ಅಧಿಕ ಸಮಯದ ನಂತರ ಬೌಲಿಂಗ್ ಮಾಡಿದರು. ಅಲ್ಲದೆ, ವಿಕೆಟ್ ಕೂಡ ಪಡೆದರು.
ರೋಹಿತ್ ಶರ್ಮ ಅವರು ಪಂದ್ಯದ ಎರಡನೇ ಇನಿಂಗ್ಸ್ನ 48ನೇ ಓವರ್ ಎಸೆದರು. ತಮ್ಮ 5ನೇ ಎಸೆತದಲ್ಲಿ ನೆದರ್ಲೆಂಡ್ಸ್ ಬ್ಯಾಟರ್ ತೇಜ ನಿಡಮನೂರು ವಿಕೆಟ್ ಪಡೆದರು. 54 ರನ್ ಬಾರಿಸಿದ್ದ ನಿಡಮನೂರು ಸಿಕ್ಸರ್ ಬಾರಿಸಲು ಯತ್ನಿಸಿ, ಮೊಹಮ್ಮದ್ ಶಮಿಗೆ ಕ್ಯಾಚ್ ನೀಡಿ, ಡಗೌಟ್ಗೆ ಮರಳಿದರು. ಈ ವಿಕೆಟ್ ಮೂಲಕ ಟೀಮ್ ಇಂಡಿಯಾ ನೆದರ್ಲೆಂಡ್ಸ್ ತಂಡವನ್ನು 250 ರನ್ಗಳಿಗೆ ಆಲೌಟ್ ಮಾಡಿ 160 ರನ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ರೋಹಿತ್ ಶರ್ಮ ಬೌಲಿಂಗ್ಗೆ ಅವರ ಪತ್ನಿ ರಿತಿಕಾ ಸಾಜ್ದೇಹ್ ಅವರು ಕ್ಲೀನ್ ಬೋಲ್ಡ್ ಆಗಿದ್ದಾರೆ. ರಿತಿಕಾ ಕೊಟ್ಟ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ. ಬರೋಬ್ಬರಿ 7 ವರ್ಷಗಳಿಗೂ ಅಧಿಕ ಸಮಯದ ಬಳಿಕ ರೋಹಿತ್ ಬೌಲ್ ಮಾಡಿದರು. ಅಲ್ಲದೆ, ಒಂದು ವಿಕೆಟ್ ಸಹ ಪಡೆದರು. ಇನ್ನು ಕೊಹ್ಲಿ ಕೂಡ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಒಂದು ವಿಕೆಟ್ ಪಡೆದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ, ಅಚ್ಚರಿಯೊಂದಿಗೆ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್ ಆಗಿದೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್ಗಳ ಬೃಹತ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಪಡೆ 47.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 250 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಇಂಡಿಯಾ 160 ರನ್ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 50 ಓವರ್ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆ ಹಾಕಿತು. ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್ ಇಂಡಿಯಾದ ಪ್ರತಿ ಬ್ಯಾಟರ್ಗಳು ಸಹ ರನ್ ಮಾರುತವನ್ನೇ ಸೃಷ್ಟಿಸಿದರು. ರೋಹಿತ್ ಶರ್ಮ (61 ರನ್, 54 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತು ಶುಭಮಾನ್ ಗಿಲ್ (51 ರನ್, 32 ಎಸೆತ, 3 ಬೌಂಡರಿ, 4 ಸಿಕ್ಟರ್) 100 ರನ್ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಸಹ ನೆದರ್ಲೆಂಡ್ಸ್ ಬೌಲರ್ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಶ್ರೇಯಸ್ ಅಯ್ಯರ್ ( ಅಜೇಯ 128 ರನ್, 94 ಎಸೆತ, 10 ಬೌಂಡರಿ, 5 ಸಿಕ್ಸರ್) ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆ.ಎಲ್. ರಾಹುಲ್ (102 ರನ್, 64 ಎಸೆತ, 11 ಬೌಂಡರಿ, 4 ಸಿಕ್ಸರ್) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್ ಆಡಿದರು. ನೆದರ್ಲೆಂಡ್ಸ್ ಬೌಲರ್ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್ಗಳ ಬೃಹತ್ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಸೆಮೀಸ್ನಲ್ಲಿ ಮುಖಾಮುಖಿಯಾಗುವ ತಂಡಗಳು
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮೀಸ್ ಪ್ರವೇಶ ಪಡೆದಿದ್ದು, ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ನ.19ಕ್ಕೆ ವಿಶ್ವಕಪ್ ಹಬ್ಬಕ್ಕೆ ವಿದ್ಯುಕ್ತ ತೆರೆ
ಎರಡೂ ಸಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)