ಮನದ ನೋವನ್ನು ಕೈ ಮೇಲೆ ಬರೆದು ಬದುಕು ಅಂತ್ಯಗೊಳಿಸಿದ ಮಹಿಳೆ! ಗಂಡನ ಕಾಮದಾಹಕ್ಕೆ ಪತ್ನಿ ಬಲಿ

Woman Enda Life
Published on

ಭೋಪಾಲ್​: ಮದುವೆ ಎಂಬುದು ಒಂದು ಸುಂದರವಾದ ಬಂಧನ. ವೇದ ಮಂತ್ರಗಳ ಸಾಕ್ಷಿಯಾಗಿ ಹಿರಿಯರು, ಬಂಧುಗಳು ಸಮ್ಮುಖದಲ್ಲಿ ಒಂದಾದ ದಂಪತಿಯನ್ನು ನೂರು ವರ್ಷಗಳ ಕಾಲ ಒಟ್ಟಿಗೆ ಬಾಳುವಂತೆ ಆಶೀರ್ವದಿಸುತ್ತಾರೆ. ಆದರೆ ಇತ್ತೀಚೆಗೆ ಕೆಲವರು ಮದುವೆಯಾದ ಸ್ವಲ್ಪ ಸಮಯದ ನಂತರ ಕಾರಣಾಂತರಗಳಿಂದ ಬೇರೆಯಾಗುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಕಾರಣಗಳು ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು. ಇದಲ್ಲದೆ, ಅನೈತಿಕ ಸಂಬಂಧಗಳಿಂದಲೂ ಸಂಸಾರದಲ್ಲಿ ತುಂಬಾ ದೌರ್ಜನ್ಯಗಳು ನಡೆಯುತ್ತಿವೆ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ಅನೈತಿಕ ಸಂಬಂಧಕ್ಕೆ ದಾರಿಯಾಗುತ್ತಿದ್ದು, ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೂ ಹೋಗುತ್ತಿದೆ. ತಾಜಾ ಘಟನೆಯೊಂದರಲ್ಲಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಪ್ರಾಣ ಕಳೆದುಕೊಂಡಿದ್ದಾಳೆ.

ಮಧ್ಯಪ್ರದೇಶದ ಇಂದೋರ್​ ಮೂಲದ ಮಹಿಳೆಯೊಬ್ಬಳು ಪತಿಯ ಚಿತ್ರಹಿಂಸೆಯನ್ನು ತಾಳಲಾರದೇ ಕೈ ಮೇಲೆಯೇ ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇಂದೋರ್​ನ ಸಿಲ್ವರ್ ಸ್ಪ್ರಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಕವಿತಾ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕವಿತಾ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಆಕೆಯ ಪತಿ ಪಂಕಜ್ ಮತ್ತು ಆತನ ಗೆಳತಿ ನಮ್ರತಾಳ ಹೆಸರನ್ನು ತನ್ನ ಕೈ ಮೇಲೆ ಬರೆದು, ನನ್ನ ಸಾವಿಗೆ ಇವರಿಬ್ಬರೇ ಕಾರಣ ಎಂದಿದ್ದಾರೆ.

ತನ್ನ ಪತಿ ಪಂಕಜ್ ಮತ್ತು ನಮ್ರತಾ ಕೆಲವು ದಿನಗಳಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆ. ತಪ್ಪು ಮಾಡಿರುವುದು ಆತ ಆದರೆ, ದಿನವೂ ಮನೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು. ಎರಡು ವಾರಗಳ ಕಾಲ ನಿರಂತರವಾಗಿ ಚಿತ್ರ ಹಿಂಸೆ ನೀಡಿದರು. ಇದನ್ನು ತಾಳಲಾರದೆ ನಾನು ಸಾವಿಗೆ ಶರಣಾಗಿದ್ದೇನೆ ಎಂದು ಮರಾಠಿ ಭಾಷೆಯಲ್ಲಿ ಕೈ ಮೇಲೆಯೇ ಕವಿತಾ ಡೆತ್​ನೋಟ್​ ಬರೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂದೋರ್​ನ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯ, ಕವಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಕುಟುಂಬಸ್ಥರು ಕೂಡ ಕವಿತಾ ಪತಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತೇಜಾಜಿ ನಗರ ಪೊಲೀಸರು ಪತಿ ಹಾಗೂ ಆತನ ಗೆಳತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net