More

    ಎರಡನೇ ಮದ್ವೆ ಆಗಬಾರದಿತ್ತು! ಪಶ್ಚಾತಾಪದ ಮಾತುಗಳನ್ನಾಡಿ ಕಣ್ಣೀರಿಟ್ಟಿದ್ದರು ದ್ವಾರಕೀಶ್​

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಕರ್ನಾಟಕದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್ (81) ಇಹಲೋಕ ತ್ಯಜಿಸಿರುವುದು ಸ್ಯಾಂಡಲ್​ವುಡ್​ಗೆ ತುಂಬಲಾರದ ನಷ್ಟ. ನಿನ್ನೆ (ಏಪ್ರಿಲ್​ 16) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್​ ಅವರ ಸಾವಿನ ಸುದ್ದಿ ಇಡೀ ಚಿತ್ರರಂಗಕ್ಕೆ ಒಂದು ದೊಡ್ಡ ಆಘಾತ ತಂದಿದೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಸೋಮವಾರ ರಾತ್ರಿ ಬೇದಿಯಾಯಿತು. ಅಲ್ಲದೆ, ರಾತ್ರಿಯಿಡಿ ನಿದ್ದೆಯನ್ನೇ ಮಾಡಿರಲಿಲ್ಲ. ಬೆಳಗ್ಗೆ ಎದ್ದಾಗ ಕಾಫಿ ಕುಡಿದು ಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ಹೇಳಿದರು. ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತವಾಗಿದೆ ಎಂದು ದ್ವಾರಕೀಶ್​ ಕುಟುಂಬ ತಿಳಿಸಿದೆ.

    ಇನ್ನೂ ದ್ವಾರಕೀಶ್​ ಅವರು ಸಾಕಷ್ಟು ನೆನಪುಗಳನ್ನು ಇಲ್ಲಿ ಬಿಟ್ಟುಹೋಗಿದ್ದಾರೆ. ಮೊದಲ ಪತ್ನಿಯ ಅನುಮತಿಯನ್ನು ಪಡೆದು ಎರಡನೇ ವಿವಾಹವಾದ ಸುದ್ದಿ ಎಲ್ಲರಿಗೂ ತಿಳಿದಿದೆ. ಆದರೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ದ್ವಾರಕೀಶ್​ ಮನಬಿಚ್ಚಿ ಮಾತನಾಡಿದ್ದರು. ಅಲ್ಲದೆ, ಎರಡನೇ ಮದುವೆಯಾಗಿದ್ದಕ್ಕೆ ಪಶ್ಚತಾಪ ವ್ಯಕ್ತಪಡಿಸಿದ್ದರು.

    ಮೊದಲ ಪರಿಚಯ
    ಸಂದರ್ಶನದಲ್ಲಿ ದ್ವಾರಕೀಶ್​ ಆಡಿದ ಮಾತುಗಳೆಂದರೆ,​ ನಾನು ನಿಜವಾದ ಲವ್​ ಅಂತಾ ಮಾಡಿದ್ದೇ ನನ್ನ ಅಂಬುಜಾಳನ್ನು. ಅದೇ ನನ್ನ ಮೊದಲ ಲವ್​. ನಾನು ನನ್ನ ಜೀವನದಲ್ಲಿ ಯಾರನ್ನೂ ಅಷ್ಟೊಂದು ಇಷ್ಟಪಟ್ಟಿರಲಿಲ್ಲ. ನಮ್ಮ ಅಣ್ಣ ಒಂದು ಮನೆಯನ್ನು ಬಾಡಿಗೆ ಕೊಟ್ಟಿದ್ದ. ಆ ಬಾಡಿಗೆ ಮನೆಗೆ ಅಂಬುಜಾ ಕುಟುಂಬ ಬಂದಿತ್ತು. ಆ ಸಮಯದಲ್ಲಿ ನನಗೆ ಕಾರು ಡಿಕ್ಕಿಯಾಗಿ ಗಾಯವಾಗಿತ್ತು. ನನ್ನ ಅಣ್ಣ ಕೋಪ ಮಾಡಿಕೊಂಡು ನನಗೆ ಬೈದಿದ್ದ. ಇದೇ ಬೇಸರದಲ್ಲಿ ನಾನು ಹಿಂದೆಗಡೆ ಇದ್ದ ಮನೆಗೆ ಹೋಗಿ ಮಲುಗಿಕೊಂಡಿದ್ದೆ. ಅಲ್ಲಿಗೆ ಅಂಬುಜಾ ಮತ್ತು ಶಾಂತು ಅಂತಾ ಅಕ್ಕ-ತಂಗಿ ಇಬ್ಬರು ಬಂದಿದ್ದರು. ಆವಾಗ ನನಗೆ ಅಂಬುಜಾ ಪರಿಚಯವಾಯಿತು. ಹಿಂದೆಗಡೆ ಮನೆಗೆ ಹೋಗಿ ಮಲಗಿಕೊಂಡಾಗ ಅಂಬುಜಾ ತಲೆ ಸವರುತ್ತಿದ್ದಳು. ಅದರಲ್ಲಿ ಏನೋ ಒಂದು ರೀತಿಯ ಸುಖ ಇರುತ್ತಿತ್ತು. ಆ ಸ್ವರ್ಗವನ್ನು ಮರೆಯೋಕೆ ಆಗಲ್ಲ. ಅಂಬುಜಾ ನನ್ನ ತಲೆ ಸವರುತ್ತಿದ್ದರೆ ನಾನು ಪ್ರಪಂಚವನ್ನೇ ಮರೆಯುತ್ತಿದ್ದೆ. ಕೈ ತೆಗೆಯಬೇಡ ಅಂಬುಜಾ ಎಂದು ಹೇಳುತ್ತಿದ್ದೆ.

    ಸಂತೋಷವಾಗಿ ನೋಡಿಕೊಂಡಳು
    ಅಂಬುಜಾ ಅವರ ಊರು ಚಿತ್ರದುರ್ಗ. ಚಿತ್ರದುರ್ಗದ ಬಸ್​ ನೋಡಿದರೆ ಸಾಕು ಓಡೋಡಿ ಹೋಗುತ್ತಿದೆ. ಆ ಬಳಿಕ ನಾನು ಆಕೆಗೆ ಪ್ರೇಮ ಪತ್ರ ಬರೆದೆ. ನನ್ನಿಂದ ನಿನ್ನನ್ನು ಬಿಟ್ಟಿರಲು ಆಗುತ್ತಿಲ್ಲ ಎಂದು ಹೇಳಿದೆ. ಬಳಿಕ ಇಬ್ಬರು ಒಂದಾದೆವು. ನಾನು ಸಿನಿಮಾಗೆ ಹೋಗುವ ಮುಂಚೆಯೂ ನಾನು ಅಂಬುಜಾಳನ್ನು ಕೇಳಿದ್ದೆ. ನಾನು ಸಿನಿಮಾಗೆ ಹೋಗಲಾ ಎಂದಿದ್ದೆ. ಅದಕ್ಕೆ ಆಕೆ ನಿಮಗೆ ಏನು ಇಷ್ಟವೋ ಅದನ್ನು ಮಾಡಿ ಅಂದಳು. ನಿಮ್ಮ ಬಿಟ್ಟರೆ ನನಗೇ ಬೇರೆ ಪ್ರಪಂಚ ಗೊತ್ತಿಲ್ಲ, ನಿಮ್ಮ ಇಷ್ಟವೇ ನನ್ನಿಷ್ಟ ಅಂದಳು. ಜೀವನದ ಪ್ರತಿ ಹಂತದಲ್ಲೂ ನನ್ನ ಪತ್ನಿ ನನ್ನನ್ನು ಸಂತೋಷವಾಗಿ ನೋಡಿಕೊಂಡಳು. ನಾನು ಮದ್ಯ ಸೇವನೆ ಮಾಡಿದರೂ ಮದ್ಯರಾತ್ರಿ ಒಂದು ಗಂಟೆಯವರೆಗೂ ನನಗಾಗಿ ಊಟಕ್ಕಾಗಿ ಕಾಯುತ್ತಿದ್ದಳು.

    ತುಂಬಾ ಕಷ್ಟವಾಯಿತು
    ಅಂಬುಜಾ ಮಾಸ್ಟರ್​ ಆಫ್​ ಸೈನ್ಸ್​ ಮಾಡಿದ್ದಾಳೆ. ದಯಾನಂದ ಕಾಲೇಜಿನಲ್ಲಿ ಪ್ರಾಧ್ಯಪಕಳಾಗಿದ್ದಳು. ಓರ್ವ ಪ್ರಾಧ್ಯಾಪಕಿ ಹಾಸ್ಯನಟನನ್ನು ಪ್ರೀತಿ ಮಾಡಿದಳು ಅಂದರೆ ಅವರಿಗಿಂತ ಗ್ರೇಟ್​ ಯಾರೂ ಇಲ್ಲ. ಆದರೆ, ಅವಳಿಲ್ಲದೆ ಬದುಕುವುದು ತುಂಬಾ ಕಷ್ಟವಾಯಿತು. 62 ವರ್ಷ ಸಂಸಾರ ಮಾಡಿ ನನ್ನಿಂದ ದೂರವಾದಳು. ನಾನು ಎಷ್ಟೊಂದು ಚೇಷ್ಟೆಗಳನ್ನು ಮಾಡಿದಾಗಲೂ ನನ್ನನ್ನು ಸಹಿಸಿಕೊಂಡಳು. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಅಂಬುಜಾ ನನ್ನ ಉಸಿರಾಗಿದ್ದಳು.

    ಅಂಬುಜಾಗೆ ನೋವು ಮಾಡಬಾರದಿತ್ತು
    ಆದರೆ, ನಾನು ಎರಡನೇ ಮದುವೆ ನಿರ್ಧಾರ ತೆಗೆದುಕೊಂಡಾಗ ಅಂಬುಜಾ ತುಂಬಾ ನೊಂದುಕೊಂಡಳು. ಆದರೆ, ನಿನ್ನ ಇಷ್ಟವೇ ನನ್ನಿಷ್ಟ ಎಂದು ಹೇಳಿದಳು. ಎರಡನೇ ಮದುವೆ ನಾನು ಮಾಡಿಕೊಂಡಿದ್ದಲ್ಲ, ಅದು ನಡೆದು ಹೋಯಿತು. ಅದು ಅನಿವಾರ್ಯವಾಗಿರಲಿಲ್ಲ. ಆಗಬೇಕೆಂಬ ಉದ್ದೇಶವೂ ಇರಲಿಲ್ಲ. ಇದರ ಬಗ್ಗೆ ಜಾಸ್ತಿ ಏನೂ ಹೇಳುವುದಿಲ್ಲ. ಎರಡನೇ ಮದುವೆ ಆಗಿ ಹೋಯಿತು ಅಷ್ಟೇ. ಅದನ್ನು ನೆನೆಸಿಕೊಂಡರೆ ಈಗಲೂ ನೋವಾಗುತ್ತದೆ. ಆಕೆಗೂ ತುಂಬಾ ನೋವಾಗುತ್ತದೆ. ಅದು ನಡೆದು ಹೋಯಿತಷ್ಟೇ. ಅದರ ಬಗ್ಗೆ ಯೋಚನೆ ಮಾಡಿದರೆ ಎಲ್ಲವೂ ಚೆನ್ನಾಗಿ ನಡೆಯಿತು. ಆದರೆ, ನಾನು ಅಂಬುಜಾಗೆ ನೋವು ಮಾಡಬಾರದಿತ್ತು. ಈ ರೀತಿ ಜೀವನದಲ್ಲಿ ತುಂಬಾ ಚೇಷ್ಟೆಗಳನ್ನು ಮಾಡಿದ್ದೇನೆ. ಅದನ್ನೆಲ್ಲಾ ಮಾಡಬಾರದಿತ್ತು. ಆದರೆ, ಅದೆಲ್ಲ ನಡೆದು ಹೋದವು. ಎಲ್ಲವೂ ದೇವರ ಇಚ್ಛೆ ಎಂದು ದ್ವಾರಕೀಶ್​ ಭಾವುಕರಾದರು.

    ಅಂಬುಜಾ ತುಂಬಾ ಕಾಡುತ್ತಾಳೆ
    ಎರಡನೇ ಪತ್ನಿಯೂ ಕೂಡ ಬಿಎಸ್​ಸಿ ಪ್ರಾಧ್ಯಾಪಕಿ. ಆಕೆಯೂ ಕೂಡ ಒಳ್ಳೆಯ ಸ್ಥಾನದಲ್ಲಿದ್ದಾಳೆ. ಅವಳಿಗೂ ನನ್ನಂತ ಹಾಸ್ಯ ನಟ ಬೇಕಾಗಿರಲಿಲ್ಲ. ಆದರೆ, ಎಲ್ಲವೂ ಆಯಿತು ಮತ್ತು ನಾನು ಎಲ್ಲವನ್ನು ಎದುರಿಸಿದೆ. ಆದರೆ, ನಾನು ಒಂಟಿಯಾಗಿ ಇರುವಾಗ ಅಂಬುಜಾ ತುಂಬಾ ಕಾಡುತ್ತಾಳೆ ಎಂದು ದ್ವಾರಕೀಶ್​ ಹಳೆಯ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದರು.

    ದ್ವಾರಕೀಶ್​ ಹಿನ್ನೆಲೆ
    ದ್ವಾರಕೀಶ್​ ಅವರು 1942, ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಶಮಾರಾವ್ ಮತ್ತು ಜಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ತಮ್ಮ ಬಾಲ್ಯ ಜೀವನವನ್ನು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಕಳೆದರು. ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ಮುಗಿಸಿದರು. ಬಳಿಕ ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ಇದಾದ ಬಳಿಕ ಸೋದರನ ಜತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1963ರಲ್ಲಿ ವ್ಯಾಪಾರವನ್ನು ಬಿಟ್ಟು ಸಿನೆಮಾ ನಟನೆಯನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಸಾಹಸಿಂಗ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧವಾಗಿತ್ತು. ಇಬ್ಬರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

    ಕಳ್ಳಕುಳ್ಳ, ಗುರು ಶಿಷ್ಯರು, ಪ್ರಚಂಡ ಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರಿನಲ್ಲಿ ರಾಜಕುಳ್ಳ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಮಂಕುತಿಮ್ಮ, ಪೊಲೀಸ್​ ಪಾಪಣ್ಣ, ಆಪ್ತಮಿತ್ರ, ಮುದ್ದಿನ ಮಾವ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

    1966ರಲ್ಲಿ ದ್ವಾರಕೀಶ್ ಅವರು ತುಂಗಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಮತೆಯ ಬಂಧನ ಚಲನಚಿತ್ರವನ್ನು ಸಹ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಡ್ತಿಪಡೆದರು. 1969ರಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಸಿನಿಮಾ ದ್ವಾರಕೀಶ್​ ಸ್ವತಂತ್ರವಾಗಿ ನಿರ್ಮಿಸಿದ ಮೊದಲ ಸಿನಿಮಾ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಮೇಯರ್ ಮುತ್ತಣ್ಣನ ನಂತರ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ಕಾಲ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ನೀಡಿದರು.

    1985ರಿಂದ ದ್ವಾರಕೀಶ್ ಅವರು ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ನಿರ್ದೇಶಕರಾಗಿ ಅವರ ಮೊದಲ ಚಿತ್ರ ವಿಷ್ಣುವರ್ಧನ್​ ನಟನೆಯ ನೀ ಬರೆದ ಕಾದಂಬರಿ ಸಿನಿಮಾ. ನಿರ್ದೇಶಕರಾಗಿ ಡ್ಯಾನ್ಸ್ ರಾಜ ಡ್ಯಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    ಜಿಟಿಡಿ ವಿರುದ್ಧ ಚುನಾವಣಾ ಅಖಾಡದಲ್ಲಿ ತೊಡೆ ತಟ್ಟಿದ್ರೂ ದ್ವಾರಕೀಶ್​! ಆದ್ರೆ ಗಳಿಸಿದ ಮತಗಳೆಷ್ಟು ಗೊತ್ತಾ?

    ನೀವು ಇಷ್ಟೊಂದು ಬದಲಾಗಿಬಿಟ್ರಾ? ಅನಿಕಾರ ಬೋಲ್ಡ್​ ಅವತಾರ ಕಂಡು ಅಭಿಮಾನಿಗಳು ಶಾಕ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts