More

    ಜಿಟಿಡಿ ವಿರುದ್ಧ ಚುನಾವಣಾ ಅಖಾಡದಲ್ಲಿ ತೊಡೆ ತಟ್ಟಿದ್ರೂ ದ್ವಾರಕೀಶ್​! ಆದ್ರೆ ಗಳಿಸಿದ ಮತಗಳೆಷ್ಟು ಗೊತ್ತಾ?

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಕರ್ನಾಟಕದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್ (81) ಇಹಲೋಕ ತ್ಯಜಿಸಿರುವುದು ಸ್ಯಾಂಡಲ್​ವುಡ್​ಗೆ ತುಂಬಲಾರದ ನಷ್ಟ. ನಿನ್ನೆ (ಏಪ್ರಿಲ್​ 16) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್​ ಅವರ ಸಾವಿನ ಸುದ್ದಿ ಇಡೀ ಚಿತ್ರರಂಗಕ್ಕೆ ಒಂದು ದೊಡ್ಡ ಆಘಾತ ತಂದಿದೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಸೋಮವಾರ ರಾತ್ರಿ ಬೇದಿಯಾಯಿತು. ಅಲ್ಲದೆ, ರಾತ್ರಿಯಿಡಿ ನಿದ್ದೆಯನ್ನೇ ಮಾಡಿರಲಿಲ್ಲ. ಬೆಳಗ್ಗೆ ಎದ್ದಾಗ ಕಾಫಿ ಕುಡಿದು ಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ಹೇಳಿದರು. ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತವಾಗಿದೆ ಎಂದು ದ್ವಾರಕೀಶ್​ ಕುಟುಂಬ ತಿಳಿಸಿದೆ.

    ದ್ವಾರಕೀಶ್​ ಅವರು ಕನ್ನಡ ಚಿತ್ರರಂಗದ ಉನ್ನತ್ತಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮೊಟ್ಟ ಮೊದಲು ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನು ‘ಸಿಂಗಾಪೂರಿನಲ್ಲಿ ರಾಜ ಕುಳ್ಳ’ ಹೊಂದಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇ ದ್ವಾರಕೀಶ್​. ಹೀಗೆ ತಮ್ಮ ಸಿನಿಮಾ ವೃತ್ತಿಜೀವನದ ಉದ್ದಕ್ಕೂ ಸಿನಿಮಾಗಳಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ಚಿತ್ರರಂಗದ ಉನ್ನತಿಗಾಗಿ ಶ್ರಮಿಸಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ, ನಾಯಕ ನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ತಮ್ಮದೇ ಛಾಪು ಮೂಡಿಸಿದರು.

    ಡಾ. ರಾಜ್​ಕುಮಾರ್​ ಅವರಿಂದ ಹಿಡಿದು ವಿಷ್ಣುವರ್ಧನ್​, ಅಂಬರೀಷ್​, ಶಂಕರ್​ನಾಗ್​ ಸೇರಿದಂತೆ ಹೆಸರಾಂತ ಕಲಾವಿದರ ಜತೆ ನಟಿಸಿ ಸೈ ಎನಿಸಿಕೊಂಡರು. ಇದೀಗ ದ್ವಾರಕೀಶ್​ ಅವರ ನಿಧನದಿಂದಾಗಿ ಚಿತ್ರರಂಗ ಪ್ರತಿಭಾವಂತನನ್ನು ಕಳೆದುಕೊಂಡಿದೆ. ದ್ವಾರಕೀಶ್​ ಅವರ ಸಾವಿಗೆ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್​ ನಿಧನದ ಹಿನ್ನೆಲೆಯಲ್ಲಿ ಚಿತ್ರರಂಗ ಇಂದು ಸಂಪೂರ್ಣ ಸ್ತಬ್ಧವಾಗಲಿದೆ.

    ಇನ್ನೂ ದ್ವಾರಕೀಶ್​ ಅವರು ಸಾಕಷ್ಟು ನೆನಪುಗಳನ್ನು ಇಲ್ಲಿ ಬಿಟ್ಟುಹೋಗಿದ್ದಾರೆ. ಮೊದಲ ಪತ್ನಿಯ ಅನುಮತಿಯನ್ನು ಪಡೆದು ಎರಡನೇ ವಿವಾಹವಾದ ಸುದ್ದಿ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಸ್ವಾರಸ್ಯಕರ ಸಂಗತಿ ತಿಳಿದುಬಂದಿದೆ. ಸಿನಿಮಾ ಕಲಾವಿದರಿಗೆ ರಾಜಕೀಯ ನಂಟು ಹೊಸದೇನಲ್ಲ. ನಟ-ನಟಿಯರು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಮತ್ತು ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಸರ್ವೇ ಸಾಮಾನ್ಯ. ದ್ವಾರಕೀಶ್​ ಅವರು ಕೂಡ ಇದಕ್ಕೆ ಹೊರತಾಗಿಲ್ಲ.

    ಚುನಾವಣೆಯಲ್ಲಿ ಸ್ಪರ್ಧೆ
    ದ್ವಾರಕೀಶ್​ ಅವರು ಈ ಹಿಂದೆ ಕನ್ನಡ ನಾಡು ಎಂಬ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಿಂದ ಕನ್ನಡ ನಾಡು ಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ, ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಜಿ.ಟಿ.ದೇವೇಗೌಡ ವಿರುದ್ಧ ಸೋಲುಂಡಿದ್ದರು. ಜಿಟಿಡಿ ಈ ಚುನಾವಣೆಯಲ್ಲಿ 60,258 ಮತಗಳನ್ನು ಪಡೆದರೆ, ದ್ವಾರಕೀಶ್ ಅವರು ಕೇವಲ 2,265 ಮತಗಳನ್ನು ಪಡೆದು ಸೋಲು ಕಂಡರು. ಇದಾದ ಬಳಿಕ ದ್ವಾರಕೀಶ್​ ಅವರು ಮತ್ತೆ ರಾಜಕೀಯ ಕಡೆ ಮುಖ ಮಾಡಲಿಲ್ಲ. ಮತ್ತೆ ಸಿನಿಮಾ ಕಡೆ ಮುಖ ಮಾಡಿದರು.

    ದ್ವಾರಕೀಶ್​ ಹಿನ್ನೆಲೆ
    ದ್ವಾರಕೀಶ್​ ಅವರು 1942, ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಶಮಾರಾವ್ ಮತ್ತು ಜಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ತಮ್ಮ ಬಾಲ್ಯ ಜೀವನವನ್ನು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಕಳೆದರು. ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ಮುಗಿಸಿದರು. ಬಳಿಕ ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ಇದಾದ ಬಳಿಕ ಸೋದರನ ಜತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1963ರಲ್ಲಿ ವ್ಯಾಪಾರವನ್ನು ಬಿಟ್ಟು ಸಿನೆಮಾ ನಟನೆಯನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಸಾಹಸಿಂಗ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧವಾಗಿತ್ತು. ಇಬ್ಬರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

    ಕಳ್ಳಕುಳ್ಳ, ಗುರು ಶಿಷ್ಯರು, ಪ್ರಚಂಡ ಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರಿನಲ್ಲಿ ರಾಜಕುಳ್ಳ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಮಂಕುತಿಮ್ಮ, ಪೊಲೀಸ್​ ಪಾಪಣ್ಣ, ಆಪ್ತಮಿತ್ರ, ಮುದ್ದಿನ ಮಾವ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

    1966ರಲ್ಲಿ ದ್ವಾರಕೀಶ್ ಅವರು ತುಂಗಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಮತೆಯ ಬಂಧನ ಚಲನಚಿತ್ರವನ್ನು ಸಹ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಡ್ತಿಪಡೆದರು. 1969ರಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಸಿನಿಮಾ ದ್ವಾರಕೀಶ್​ ಸ್ವತಂತ್ರವಾಗಿ ನಿರ್ಮಿಸಿದ ಮೊದಲ ಸಿನಿಮಾ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಮೇಯರ್ ಮುತ್ತಣ್ಣನ ನಂತರ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ಕಾಲ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ನೀಡಿದರು.

    1985ರಿಂದ ದ್ವಾರಕೀಶ್ ಅವರು ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ನಿರ್ದೇಶಕರಾಗಿ ಅವರ ಮೊದಲ ಚಿತ್ರ ವಿಷ್ಣುವರ್ಧನ್​ ನಟನೆಯ ನೀ ಬರೆದ ಕಾದಂಬರಿ ಸಿನಿಮಾ. ನಿರ್ದೇಶಕರಾಗಿ ಡ್ಯಾನ್ಸ್ ರಾಜ ಡ್ಯಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    ಅರ್ಜುನ್​ ಸರ್ಜಾರ ಕಿರಿಯ ಪುತ್ರಿಯನ್ನು ನೋಡಿದ್ದೀರಾ? ಸಿಕ್ಕಾಪಟ್ಟೆ ಬೋಲ್ಡ್​ ಅಂಜನಾ ಸರ್ಜಾ!

    ಪ್ರೀತಿಯ ಮಗಳೇ ನೀನಿಲ್ಲದ ಈ ಬದುಕು ನನಗೆ ಬೇಡ ಅನ್ನುತ್ತಲೇ ಪ್ರಾಣಬಿಟ್ಟ ತಾಯಿ! ಮನಕಲಕುತ್ತೆ ಈ ದುರಂತ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts