ಜಮೀನಿನಲ್ಲಿ ರೈತ ದಂಪತಿಯ ಶವಪತ್ತೆ! ನಿಗೂಢ ಹತ್ಯೆ ಶಂಕೆ

ವಿಜಯವಾಣಿ - 2024-09-20T112856.460
Published on

ಚಿತ್ರದುರ್ಗ: ನಿನ್ನೆ (ಸೆ.19) ಸಂಜೆ ಈರುಳ್ಳಿ ಬೆಳೆ ಹಾಕಿದ್ದ ಜಮೀನಿಗೆ ತೆರಳಿದ್ದ ದಂಪತಿ ಬರ್ಬರ ಹತ್ಯೆಯಾದ ಘಟನೆ ಜಿಲ್ಲೆಯ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ದಂಪತಿಗಳ ಕತ್ತು ಸೀಳಿರುವುದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ.

ಜಮೀನಿನಲ್ಲಿ ಸಾವಿಗೀಡಾದ ಮೃತರನ್ನು ಹನುಮಂತಪ್ಪ (46) ಮತ್ತು ಅವರ ಪತ್ನಿ ತಿಪ್ಪಮ್ಮ (42) ಎಂದು ಗುರುತಿಸಲಾಗಿದೆ. ಕತ್ತು ಸೀಳಿದ ಸ್ಥಿತಿಯಲ್ಲಿ ಜಮೀನಿನಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಮೃತರ ಸಂಬಂಧಿಕರು, ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದೆ. ಇದು

ಭೀಕರ ಕೊಲೆಯೋ ಅಥವಾ ಕಾಡು ಪ್ರಾಣಿಗಳ ದಾಳಿಯೋ? ಎಂಬ ಅನುಮಾನ ಕಾಡಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ನಿಗೂಢ ಹತ್ಯೆಯ ಹಿಂದಿನ ಕಾರಣವೇನು ಎಂಬುದನ್ನು ಪರಿಶೀಲಿಸಿದ್ದಾರೆ.

ಎಸ್ಪಿ ರಂಜಿತ್ ಬಂಡಾರು, ಡಿವೈಎಸ್ಪಿ ದಿನಕರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಪ್ರಕರಣ ತುರುವನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.

ಪೋಷಕರ ಬರ್ಬರ ಹತ್ಯೆ ಬೆನ್ನಲ್ಲೇ ತುರುವನೂರು ಠಾಣೆಯಲ್ಲಿ ಪುತ್ರಿ ಹರ್ಷಿತಾ ದೂರು ದಾಖಲಿಸಿದ್ದು, ಪತಿ ಮಂಜುನಾಥ್ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಎಸಗಿದ್ದಾರೆ. ವರ್ಷದ ಹಿಂದೆ ಮಂಜುನಾಥ್ ಜತೆ ಹರ್ಷಿತಾ ಮದುವೆ ಆಗಿತ್ತು. ವಿವಾಹ ಆದಾಗಿನಿಂದಲೂ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮಂಜುನಾಥ್ ಮತ್ತು ಕುಟುಂಬಸ್ಥರು ಆಗಾಗ್ಗೆ ನಮ್ಮ ವಿರುದ್ಧ ಗಲಾಟೆ ಮಾಡುತ್ತಿದ್ದರು ಎಂದು ಆಕೆ ದೂರಿದ್ದಾರೆ. ಪತಿ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಒಂದು ತಿಂಗಳ ಹಿಂದಷ್ಟೇ ತಾಯಿ ತಿಪ್ಪಮ್ಮ ಮಗಳನ್ನು ತವರಿಗೆ ಕರೆತಂದಿದ್ದರು ಎಂದು ಹೇಳಲಾಗಿದೆ.

ದ್ವೇಷದಿಂದ ತಂದೆ ಹನುಮಂತಪ್ಪ, ತಾಯಿ ತಿಪ್ಪಮ್ಮಳ ಕೊಲೆ ಮಾಡಲಾಗಿದೆ ಎಂದು ಪುತ್ರಿ ಆರೋಪಿಸಿದ್ದಾರೆ. ಮಂಜುನಾಥ್, ಸಹೋದರ ರಘು, ಸಂಬಂಧಿ ಮಲ್ಲಿಕಾರ್ಜುನ, ಮಂಜುನಾಥನ ತಂದೆ ಚಂದ್ರಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ರಿಜಿಸ್ಟರ್ ಆಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net