ಪತ್ನಿಗೆ ಬೆಂಕಿ ಹಚ್ಚಲು ಹೋಗಿ ಪೇಚಿಗೆ ಸಿಲುಕಿದ!

Fire November
Published on

ಬೆಂಗಳೂರು: ಚಂದ್ರಲೇಔಟ್​ನಲ್ಲಿ ಪತ್ನಿಯೇ ಪತಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಾನೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಪತ್ನಿ ವಿರುದ್ಧ ಸುಳ್ಳು ಆರೋಪ ಹೊರಿಸಿದ ಪತಿಯ ಅಸಲಿ ಬಣ್ಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಚಂದ್ರಾಲೇಔಟ್​ನ

ಗಂಗೊಂಡನಹಳ್ಳಿ ನಿವಾಸಿ ಆರೀಫ್ (24) ಸುಳ್ಳು ದೂರು ನೀಡಿದವ. ಟೈಲ್ಸ್ ಅಳವಡಿಕೆ ಕೆಲಸ ಮಾಡುತ್ತಿದ್ದ ಆರೀಫ್, ಪತ್ನಿ ಅಮರೀನಾ ಬಾನು ಮತ್ತು ಅತ್ತೆ ಫಾರೂ ಜತೆ ವಾಸಿಸುತ್ತಿದ್ದ. ಕುಡಿದು ಬಂದು ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಮಾ.15ರ ಸಂಜೆ 6ಕ್ಕೆ ಪತ್ನಿ ಜತೆ ಜಗಳ ತೆಗೆದಿದ್ದ. ಅಲ್ಲದೆ, ಪತ್ನಿ ಮತ್ತು ಅತ್ತೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡುವುದಾಗಿ ಬೆದರಿಸಿದ ಆರೀಫ್, ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಕೈಗೆತ್ತಿಕೊಂಡಾಗ ಅವರಿಬ್ಬರೂ ಆತಂಕಗೊಂಡು ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡು ಜೋರಾಗಿ ಕೂಗಿದ್ದರು. ಅವರ ಚೀರಾಟ ಕೇಳಿ ನೆರೆಹೊರೆಯವರು ಮನೆ ಬಳಿ ಜಮಾಯಿಸಿದ್ದರು. ಇದರಿಂದ ಭಯಗೊಂಡ ಆರೀಫ್, ಕೈಯಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮನೆಯಿಂದ ಹೊರ ಓಡಲು ಯತ್ನಿಸಿದ್ದ. ಆಗ ಸ್ಥಳೀಯರು ಆತನ ಮೈಗೆ ನೀರು ಸುರಿದು ಆಸ್ಪತ್ರೆಗೆ ದಾಖಲಿಸಿದ್ದರು. ಆರೀಫ್ ದೇಹ ಶೇ.30 ಭಾಗ ಸುಟ್ಟು ಹೋಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಆರೋಪ: ಪತ್ನಿ ಮತ್ತು ಅತ್ತೆ ಜತೆಯಾಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರ ಬಳಿ ಆರೀಫ್ ದೂರಿದ್ದ. ಆತನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಿಚಾರಿಸಿದಾಗ ಆರೀಫ್ ಡ್ರಾಮಾ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ ?

ನಾನು ಹೊಸದಾಗಿ ಮನೆ ಮಾಡಿದ್ದು, ಮನೆಗೆ ಬಣ್ಣ ಬಳಿಯಲು 2 ಸಾವಿರ ರೂ. ಇಟ್ಟುಕೊಂಡಿದ್ದೆ. ಇದರಲ್ಲಿ 1 ಸಾವಿರ ರೂ. ತನಗೆ ಬೇಕೆಂದು ಪತ್ನಿ ಕೇಳಿದಳು. ಬಣ್ಣ ಬಳಿದು ಉಳಿದ ಹಣದಲ್ಲಿ ದಿನಸಿ ತರಬೇಕೆಂದರೂ ಹಣ ಬೇಕೆ ಬೇಕೆಂದು ಹಠ ಹಿಡಿದ ಆಕೆ, ಹಣ ಕೊಡದಿದ್ದರೆ ನನ್ನನ್ನು ಕೊಲೆ ಮಾಡುವುದಾಗಿ ಸೀಮೆಎಣ್ಣೆ ಇದ್ದ ಡಬ್ಬ ತಂದು ಬೆದರಿಸಿದಳು. ಇದರಿಂದ ನೊಂದು ‘ನಾನೇ ಸಾಯುತ್ತೇನೆ’ ಎಂದೆ. ಅಲ್ಲೇ ಇದ್ದ ಅತ್ತೆ, ನನ್ನ ಮೇಲೆ ಸೀಮೆಎಣ್ಣೆ ಸುರಿಯುವಂತೆ ಪತ್ನಿಗೆ ಹೇಳಿದಳು. ಅದರಂತೆ ಆಕೆ ನನಗೆ ಬೆಂಕಿ ಹಚ್ಚಿದಳು. ಮನೆಯಿಂದ ಹೊರ ಬಂದು ಅಕ್ಕಪಕ್ಕದಲ್ಲಿ ಸಹಾಯ ಕೇಳಿದಾಗ ಸ್ಥಳೀಯರು ಮೈ ಮೇಲೆ ನೀರು ಸುರಿದು ಬೆಂಕಿ ಆರಿಸಿದ್ದರು ಎಂದು ಪೊಲೀಸರಿಗೆ ಆರೀಫ್ ಹೇಳಿಕೆ ನೀಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net