

ರಾಣೆಬೆನ್ನೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿ 2ನೇ ಪತಿಯೇ ಆಕೆಯ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆ ಇಂದು (ಆ.20) ರಾಣೆಬೆನ್ನೂರು ನಗರ ಹೊರವಲಯದ ಸುವರ್ಣ ಪಾರ್ಕ್ನಲ್ಲಿ ನಡೆದಿದೆ.
ಪದ್ಮಾ ಒಂದನೇ ಪತಿಯನ್ನು ತೊರೆದ ಬಳಿಕ ಯೋಗೇಶನನ್ನು ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಇದಾದ ನಂತರ ಇಬ್ಬರು ದಾವಣಗೆರೆಯಲ್ಲಿ ನೆಲೆಸಿದ್ದರು. ಪದ್ಮಾ ರಾಣೆಬೆನ್ನೂರು ನಗರದಲ್ಲಿ ವೃದ್ದರೊಬ್ಬರನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ನೀನು ಯಾರದ್ದೋ ಜತೆ ಮಾತನಾಡುತ್ತೀಯಾ ಎಂದು ಯೋಗೇಶ ಪದ್ಮಾಳೊಂದಿಗೆ ಜಗಳ ಮಾಡಿದ್ದಾನೆ. ಇದೇ ಕಾರಣಕ್ಕೆ ಇಂದು ಆಕೆಗೆ ಪಾನಿಪುರಿ ತಿನಿಸುವೆ ಬಾ ಎಂದು ಕರೆದುಕೊಂಡು ಹೋಗಿ ಸ್ವರ್ಣ ಪಾರ್ಕ್ನಲ್ಲಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.
ಬೆಂಗಳೂರಿನ ಉಲ್ಲಾಳದ ಪದ್ಮಾ (21) ಎಂಬುವಳ ಮೇಲೆ ಎರಡನೇ ಪತಿಯಾದ ದಾವಣಗೆರೆಯ ರಾಮನಗರದ ನಿವಾಸಿ ಯೋಗೇಶ ರಾಜಪ್ಪ (22) ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ.
ಆತನಿಂದ ಬಿಡಿಸಿಕೊಂಡು ಓಡುತ್ತಿದ್ದ ಪದ್ಮಾಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಹಲಗೇರಿ ಠಾಣೆ ಪೊಲೀಸರು ಪದ್ಮಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿ ಯೋಗೇಶ ಪೊಲೀಸರನ್ನು ನೋಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.