

ಲಖನೌ: ದೂರದ ಊರಿನಲ್ಲಿ ಕೆಲಸದ ಮೇಲಿದ್ದ ಗಂಡ, ಹೆಂಡತಿ ಮಕ್ಕಳಿಗೆ ಸರ್ಪೈಸ್ ನೀಡುವ ಸಲುವಾಗಿ ರಾತ್ರೋರಾತ್ರಿ ಬಂದರೆ ಆತನಿಗೆ ಬಿಗ್ ಶಾಕ್ ಕಾದಿತ್ತು. ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿದ ಆತ ಮಾಡಿದ್ದೇನು ಎಂದು ತಿಳಿದರೆ ನೀವೂ ಶಾಕ್ ಆಗ್ತೀರ.
ಉತ್ತರ ಪ್ರದೇಶದ ಆಲಿಗರ್ ಜಿಲ್ಲೆಯ ಸರಸೋಲ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸುಂದರ್ ಲಾಲ್ ಹೆಸರಿನ ವ್ಯಕ್ತಿಗೆ ಕಮಲೇಶಿ ಜತೆ ಮದುವೆಯಾಗಿದ್ದು ಹರಿಯೋಂ ಮತ್ತು ಲಲಿತ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸುಂದರ್ ಲಾಲ್ ಹಿಮಾಚಲ ಪ್ರದೇಶದ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾನೆ. ವರ್ಷಾಂತ್ಯದಲ್ಲಿ ರಜೆ ಸಿಕ್ಕ ಹಿನ್ನೆಲೆಯಲ್ಲಿ ಆತ ಪತ್ನಿಗೆ ತಿಳಿಸದೆಯೇ ಮನೆಗೆ ಬರುವ ಪ್ಲಾನ್ ಮಾಡಿದ್ದಾನೆ. ನನ್ನ ನೋಡಿ ಪತ್ನಿ ಖುಷಿಯಾಗುತ್ತಾಳೆ ಎನ್ನುವ ನಿರೀಕ್ಷೆಯೊಂದಿಗೆ ರಾತ್ರಿ ಸಮಯದಲ್ಲಿ ಮನೆಗೆ ಬಂದಿದ್ದಾನೆ. ಆದರೆ ಆ ರೀತಿ ಮನೆಗೆ ಬಂದ ಸುಂದರ್ ಲಾಲ್ನ ಸಂತೋಷ ಕೆಲವೇ ಕ್ಷಣಗಳಲ್ಲಿ ಭಗ್ನವಾಗಿದೆ.
ಸುಂದರ್ ಲಾಲ್ ಮನೆಗೆ ಬರುವಾಗ ಮಕ್ಕಳು ಮನೆ ಹೊರಗೆ ಆಡುತ್ತಿದ್ದರು. ಅವರನ್ನು ಮುದ್ದಾಡಿ, ನಂತರ ಆತ ಮನೆಯೊಳಗೆ ಬಂದಿದ್ದಾನೆ. ಆಗ ತನ್ನ ಪತ್ನಿ ಬೇರೊಬ್ಬ ಯುವಕನೊಂದಿಗೆ ಇರುವ ದೃಶ್ಯ ಕಂಡುಬಂದಿದೆ. ತಕ್ಷಣ ಆತ ದಿಗ್ಭ್ರಮೆಯಿಂದ ನಿಂತಿದ್ದಾನೆ. ಆಗ ಅಲ್ಲಿದ್ದ ಯುವಕ ಈತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅದಕ್ಕೆ ಅವಕಾಶ ಕೊಡದ ಸುಂದರ್ ಲಾಲ್ ಬಾಗಿಲು ಮುಚ್ಚಿ, ಮನೆಯೊಳಗಿದ್ದ ಕ್ರಿಕೆಟ್ ಬ್ಯಾಟ್ನಿಂದ ಆ ಯುವಕನ ತಲೆಗೆ ಹೊಡೆಯಲು ಆರಂಭಿಸಿದ್ದಾನೆ. ಯುವಕ ರಕ್ತ ಕಾರುತ್ತ ಬೀಳುವವರೆಗೂ ಹೊಡೆದಿದ್ದಾನೆ. ಯುವಕ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಮನೆಯೊಳಗೆ ನಡೆದ ದೃಶ್ಯಗಳನ್ನೆಲ್ಲ ನೋಡಿದ ಹಿರಿಯ ಮಗ, ಹತ್ತಿರವಿದ್ದ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಚಾರವನ್ನು ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಮೃತ ಯುವಕನ ಹೆಸರು ವಿಕಾಸ್. ಆತನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ ಕಮಲೇಶಿ, ಪ್ರೀತಿಯ ಬಲೆಗೂ ಬಿದ್ದಿದ್ದಳು. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದು, ವಿಕಾಸ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಆತ ಬಂದಾಗಲೆಲ್ಲ ಅವಳು ಮಕ್ಕಳನ್ನು ಹೊರಗೆ ಆಟವಾಡಲು ಕಳುಹಿಸುತ್ತಿದ್ದಳು. ಆತನನ್ನು ಅಂಕಲ್ ಎಂದು ಮಕ್ಕಳಿಗೆ ಪರಿಚಯ ಮಾಡಿಕೊಟ್ಟಿದ್ದಳು ಎನ್ನುವ ವಿಚಾರ ವಿಚಾರಣೆಯಲ್ಲಿ ತಿಳಿದುಬಂದಿದೆ. ಹೆಂಡತಿಯನ್ನು ಆತನೊಂದಿಗೆ ನೋಡಿದ ಸಿಟ್ಟಿಗೆ ಕೊಲೆ ಮಾಡಿದ್ದಾನೆ ಸುಂದರ್ ಲಾಲ್ ಒಪ್ಪಿಕೊಂಡಿದ್ದಾನೆ. ಮೃತನ ಕುಟುಂಬಕ್ಕೆ ವಿಚಾರ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)