ಪದೇಪದೆ ಸಾಯುತ್ತೇನೆಂದು ಹೆದರಿಸುತ್ತಿದ್ದ ಹೆಂಡತಿಗೆ ಡೈವೋರ್ಸ್​ ಕೊಟ್ಟ ಗಂಡ

wife
Published on

ಭೋಪಾಲ್​: ಗಂಡನಿಂದ ಏನಾದರೂ ಪಡೆಯಬೇಕೆಂದರೆ ಏನು ಮಾಡಬೇಕು? ಕೆಲವರು ಪ್ರೀತಿಯಿಂದ ಕೇಳುತ್ತಾರೆ. ಕೆಲವು ಹೆಂಡತಿಯರು ಜಗಳವಾಡಿ ತರಿಸಿಕೊಳ್ಳುತ್ತಾರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಭಯ ಪಡಿಸಿ ಪಡೆಯುತ್ತಾರೆ. ಅದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಭಯ ಹುಟ್ಟಿಸಿದ ಹೆಂಡತಿಗೆ ಗಂಡ ವಿಚ್ಛೇದನ ನೀಡಿ ಮನೆಗೆ ಕಳುಹಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಅವರಿಬ್ಬರದ್ದು ಪ್ರೇಮ ವಿವಾಹ. ಸೋಶಿಯಲ್​ ಮೀಡಿಯಾದಲ್ಲಿ ಪರಿಚಯವಾಗಿದ್ದ ಜೋಡಿ, ಪ್ರೀತಿಸಿ, 2014ರಲ್ಲಿ ಮದುವೆಯಾಗಿದ್ದರು. ಆದರೆ ಮೊದಲಿನಿಂದಲೂ ಸಣ್ಣ ಪುಟ್ಟ ವಿಚಾರಕ್ಕೂ ದಾಂಪತ್ಯದಲ್ಲಿ ಜಗಳವಾಗುತ್ತಿತ್ತು. ಈ ರೀತಿಯಾದಾಗಲೆಲ್ಲ ಹೆಂಡತಿ ಸಾಯುವುದಾಗಿ ಹೆದರಿಸುತ್ತಿದ್ದಳಂತೆ.

ಇತ್ತೀಚೆಗೆ ಇದೇ ರೀತಿ ಜಗಳವೊಂದು ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಪತ್ನಿ ಮಹಡಿ ಮೇಲಿನಿಂದ ಕೆಳಕ್ಕೆ ಹಾರಿದ್ದಾಳೆ. ಆದರೆ ಕೆಳಗೆ ಬೀಳದೆ, ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಸಕ್ಕಿಹಾಕಿಕೊಂಡಿದ್ದಾಳೆ. ಪತಿ ಮತ್ತು ಅತ್ತೆ ಸೇರಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮನ ನೊಂದಿದ್ದ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಕುಟುಂಬ ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿದೆ ಕೂಡ.

ತನ್ನ ತಪ್ಪಿನಿಂದಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾದಾಗ ಹೆಂಡತಿಗೆ ಅವಮಾನವಾದಂತಾಗಿದೆ. ನನಗೆ ತಪ್ಪಿನ ಅರಿವಾಗಿದೆ, ತಿದ್ದಿಕೊಂಡು ಬದುಕುತ್ತೇನೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾಳೆ. ಆದರೆ ಆಕೆಯೊಂದಿಗೆ ಬದುಕುವುದಕ್ಕೆ ಪತಿ ನಿರಾಕರಿಸಿದ್ದಾನೆ. ಈ ವಿಚಾರದಲ್ಲಿ ತನ್ನ ಮಗಳದ್ದೇ ತಪ್ಪಿದೆ ಎಂದು ಆಕೆಯ ತಂದೆ ಕೂಡ ಹೇಳಿದ್ದಾರೆ.

ಇದೀಗ ಇಬ್ಬರಿಗೂ ಕೌನ್ಸೆಲಿಂಗ್​ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಕೌನ್ಸೆಲಿಂಗ್​ ವರದಿ ಸಿಕ್ಕ ನಂತರ ತೀರ್ಪನ್ನು ನೀಡಲಾಗುವುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net