

ಕಾಕಿನಾಡ: ದುಬೈಗೆ ಹೋಗಿ ಕಷ್ಟಪಟ್ಟು ತಾನು ದುಡಿದ ಹಣವನ್ನು ಕಷ್ಟಕಾಲದಲ್ಲಿ ಉಪಯೋಗಿಸುವ ಎಂಬ ಮುಂದಾಲೋಚನೆ ಮಾಡಿದ್ದ ಪತಿರಾಯ, ತನ್ನ ಹೆಂಡತಿಗೆ ಆ ಹಣದ ಜವಾಬ್ದಾರಿ ಕೊಟ್ಟು, ವಿದೇಶಕ್ಕೆ ತೆರಳಿದರೆ, ಇತ್ತ ಪತ್ನಿ ಮಾಡಿದ ಎಡವಟ್ಟು, ಕರ್ಮಕಾಂಡದಿಂದ ಆತ ಸಾವಿಗೆ ಶರಣಾದ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಸಂಭವಿಸಿದೆ (Death Note).
ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ, ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶುಕ್ರವಾರ (ಮಾ.28) ಮೂವರನ್ನು ಬಂಧಿಸಿದ್ದಾರೆ. ಎಸ್‌ಐ ಎಂ. ವೆಂಕಟೇಶ್ವರ ರಾವ್ ಮಾತನಾಡಿ, "ಮಂಡಲದ ಖಂಡವಳ್ಳಿ ಗ್ರಾಮದ ಚಲ್ಲಾ ದುರ್ಗಾ ರಾವ್ (29) ಈ ತಿಂಗಳ 25ರಂದು ಪೆರಾವಲಿ ಲಾಕ್ಸ್‌ನಲ್ಲಿ ತನ್ನ ಬೈಕ್ ಬಿಟ್ಟು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, 26ರಂದು ಇರಗವರಂ ಮಂಡಲದ ರಪಾಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಾಯುವ ಮುನ್ನ ಆತ ಬರೆದಿರುವ ಡೆತ್ನೋಟ್ನಲ್ಲಿ, ಮೋತ್ರಪು ಅಮೋಘ್, ಮೋತ್ರಪು ಶಿವ ಪ್ರಸಾದ್ ಮತ್ತು ಮೃತನ ಪತ್ನಿ ಚಲ್ಲಾ ದಿವ್ಯ ಕುಮಾರಿ ನನ್ನ ಸಾವಿಗೆ ನೇರ ಹೊಣೆ ಎಂದು ಹೆಸರಿಸಿದ್ದಾನೆ" ಎಂದು ಹೇಳಿದ್ದಾರೆ.
ದೂರುದಾರರಾದ ಚಲ್ಲಾ ವೆಂಕಟ ಸುಬ್ಬರಾವ್ ನೀಡಿದ ವಿವರಗಳ ಪ್ರಕಾರ, ಗ್ರಾಮದ ಹಿರಿಯರಿಂದ ಬಂದ ಮಾಹಿತಿ ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ, ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದುರ್ಗಾ ರಾವ್, ಅವರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಗ್ರಾಮದ ಹಿರಿಯರು, ಆರೋಪಿ ಅಮೋಘ್ ಮನೆಗೆ ಹೋಗಿ ಮದುವೆಯಾದ ಹೆಣ್ಣುಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದ ಆತನ ತಂದೆ ಶಿವ ಪ್ರಸಾದ್, ದುರ್ಗಾ ರಾವ್ನನ್ನೇ ನಿಂದಿಸಿ ಅವಮಾನಿಸಿದ್ದ. ಇದರಿಂದ ಮನನೊಂದ ವ್ಯಕ್ತಿ, ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದರು.
ಪತ್ರದಲ್ಲಿ, "ದುಬೈನಲ್ಲಿ ನಾನು ಸಂಪಾದಿಸಿದ ಹಣವನ್ನೆಲ್ಲ ಪತ್ನಿ ದಿವ್ಯಾ ಆತನ ಪ್ರಿಯಕರನೊಂದಿಗೆ ಕಳೆದಿದ್ದಾಳೆ. ಕೂಡಿಟ್ಟ ಹಣವನ್ನು ದರೋಡೆ ಮಾಡಿದ್ದಾಳೆ. ಇದರ ಜತೆಗೆ ಅನೈತಿಕ ಸಂಬಂಧ ಕೂಡ ಹೊಂದಿದ್ದಾಳೆ" ಎಂದು ಬರೆದು ಕಾಲುವೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮೂವರು ಆರೋಪಿಗಳನ್ನು ಶುಕ್ರವಾರ ತನುಕು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲಾಯಿತು ಎಂದು ಎಸ್‌ಐ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).