

ಪುತ್ತೂರು: ಸುಳ್ಯದ ಆಲೆಟ್ಟಿ ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಮೊರಂಗಲ್ಲು ತರವಾಡು ಮನೆಯ ಗೃಹ ಪ್ರವೇಶ ಹಾಗೂ ಶ್ರೀ ಧೂಮಾವತಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಧರ್ಮ ಚಾವಡಿಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ಮತ್ತು ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠಾ ಕಾರ್ಯಕ್ರಮ ಮಾ.೩೦ರಿಂದ ಎ.೨ ರತನಕ ನಡೆಯಲಿದೆ.
೩೦ರಂದು ಬೆಳಗ್ಗೆ ೯ರಿಂದ ಹಸಿರುವಾಣಿ ಮೆರವಣಿಗೆ ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ, ಸಂಜೆ ೫ಕ್ಕೆ ತಂತ್ರಿವರ್ಯರ ಆಗಮನವಾಗಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಸುದರ್ಶನ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಚಾಟನೆ, ಉಚ್ಚಾಟನೆ ಬಲಿ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಹಾಂತ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.
೩೧ರಂದು ಬೆಳಗ್ಗೆ ೬ಕ್ಕೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹೋಮ, ತಿಲಾಹೋಮ, ಪವಮಾನ ಹೋಮ, ಚಕ್ರಾಬ್ದ ಪೂಜೆ, ದ್ವಾದಶಮೂರ್ತಿ ಆರಾಧನೆ, ಬ್ರಹ್ಮಕಲಶ ಪೂಜೆ, ಪೂರ್ವಾಹ್ನ ಗಂಟೆ ೯.೦೪ರ ಸುಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ಹಾಗೂ ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕ ನಡೆದು ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯವಾಗಿ ಪ್ರಸಾದ ವಿತರಣೆಯಾಗಲಿದೆ.
ಧಾರ್ಮಿಕ ಸಭೆ
ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಬೆಳಗ್ಗೆ ೧೦.೩೦ಕ್ಕೆ ನಡೆಯಲಿದೆ. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕುಂಟಾರು ಕ್ಷೇತ್ರದ ರವೀಶ ತಂತ್ರಿವರ್ಯರು ಆಶೀರ್ವಚನ ನೀಡಲಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ರಮಾನಾಥ ರೈ, ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಒಕ್ಕಲಿಗ ಗೌಡ ಸಂಘದ ಡಾ.ಕೆ.ವಿ.ರೇಣುಕಾಪ್ರಸಾದ್, ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಯಪ್ರಕಾಶ್ ಕುಂಚಡ್ಕ, ಪ್ರವೀಣ್ ಕುಮಾರ್ ಶೆಟ್ಟಿ, ವೀಣಾ ವಸಂತ ಆಲೆಟ್ಟಿ, ಪಿ.ಬಿ.ದಿವಾಕರ ರೈ, ತೀರ್ಥಕುಮಾರ್ ಕುಂಚಡ್ಕ, ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಎನ್.ಜಯಪ್ರಕಾಶ್ ರೈ, ಹರಿನಾಥ ರೆಡ್ಡಿ ಉಪಸ್ಥಿತರಿರುವರು. ಮಧ್ಯಾಹ್ನ ಸ್ಥಳೀಯ ಭಜಕ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೫.೩೦ಕ್ಕೆ ಚೌಕಿ ಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು. ೬ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿರುವುದು.
ದೈವಗಳ ನೇಮೋತ್ಸವ
೧ರಂದು ಪೂರ್ವಾಹ್ನ ೭ರಿಂದ ಶ್ರೀ ಭಗವತಿ ಸೇವೆ, ಚಂಡಿಕಾ ಶಾಂತಿ ಹೋಮವು ನಡೆಯಲಿದೆ. ಸಂಜೆ ೭ರಿಂದ ಭಗವತಿ ಸೇವೆಯಾಗಿ, ರಾತ್ರಿ ೮ಕ್ಕೆ ಶ್ರೀ ದೈವಗಳ ಭಂಡಾರ ಏರುವುದು ನಂತರ ಅನ್ನಸಂತರ್ಪಣೆಯಾಗಲಿದೆ. ೯ ರಿಂದ ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮೂಕಾಂಬಿಕಾ ಗುಳಿಗ ದೈವ, ಶ್ರೀ ಕುಪ್ಪೆಪಂಜುರ್ಲಿ, ಶ್ರೀ ಪಾಷಾಣಮೂರ್ತಿ ಹಾಗೂ ಶ್ರೀ ಗುಳಿಗ ದೈವಗಳ ಕೋಲ ನಡೆಯಲಿರುವುದು. ೨ರಂದು ಬೆಳಗ್ಗೆ ೯ರಿಂದ ಶ್ರೀ ಧೂಮಾವತಿ, ಬಂಟ ದೈವಗಳ ನೇಮೋತ್ಸವ ನಡೆದು ಗಂಧಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು ಎಂದು ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ತಿಳಿಸಿದರು.