ಅಂಬಟಿ ರಾಯುಡು ಆರಾಮಾ? RCB ಅಭಿಮಾನಿಗಳ ಟೀಕೆಗೆ ಕಡೆಗೂ ಪ್ರತಿಕ್ರಿಯಿಸಿದ ಮಾಜಿ ಸಿಎಸ್​ಕೆ ಸ್ಟಾರ್​

ವಿಜಯವಾಣಿ - 2025-03-29T202756.973
Published on

RCB Fans: ನಿನ್ನೆ (ಮಾ.28) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್​​ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಚೆನ್ನೈ ತವರಿನಲ್ಲೇ ಸಿಎಸ್​ಕೆಯನ್ನು ಬಗ್ಗುಬಡಿದ ಆರ್​ಸಿಬಿ ಹೆಚ್ಚುವರಿ ಅಂಕಗಳೊಂದಿಗೆ ಪ್ರಸ್ತುತ ಐಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೇ ಖುಷಿಯಲ್ಲಿ ತೇಲಾಡುತ್ತಿರುವ ಆರ್​ಸಿಬಿಯ ನಿಯತ್ತಿನ ಅಭಿಮಾನಿಗಳು, ತಮ್ಮ ತಂಡವನ್ನು ಸದಾ ಪರೋಕ್ಷವಾಗಿ ಅಣಕಿಸುವ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವಿರುದ್ಧ ಟ್ರೋಲ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

17 ವರ್ಷಗಳ ಬಳಿಕ ಎರಡನೇ ಬಾರಿಗೆ ಸಿಎಸ್​ಕೆ ತಂಡವನ್ನು ಅವರ ತವರಿನಲ್ಲೇ ಮಣಿಸಿದ ಆರ್​ಸಿಬಿ, ರಜತ್​ ಪಟಿದಾರ್​ ನಾಯಕತ್ವದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಯಿತು. ಇದು ಫ್ರಾಂಚೈಸಿಯ ಫ್ಯಾನ್ಸ್​ಗಳ ಸಂತಸವನ್ನು ದುಪ್ಟಟ್ಟಾಗಿಸಿತು. ಪ್ರತಿಬಾರಿ ಒಂದಲ್ಲ ಒಂದು ರೀತಿ ಆರ್​ಸಿಬಿಯನ್ನು ಟೀಕಿಸುವ ಅಂಬಟಿ ವಿರುದ್ಧ ಕಿಡಿಕಾರುತ್ತಿದ್ದ ಬೆಂಗಳೂರು ಅಭಿಮಾನಿ ಬಳಗ, ಭರ್ಜರಿ ಗೆಲುವಿನ ಕ್ಷಣಕ್ಕಾಗಿ ಕಾದು ಕುಳಿತ್ತಿತ್ತು. ಅದಕ್ಕೆ ತಕ್ಕಂತೆಯೇ ನಿನ್ನೆಯ ಪಂದ್ಯದಲ್ಲಿ ಭಾರೀ ಪೈಪೋಟಿ ಕೊಡದೆ ಸೋತ ಸಿಎಸ್​ಕೆಯನ್ನು ಈಗ ಹಿಗ್ಗಾಮುಗ್ಗಾ ಕಾಲೆಳೆದಿದ್ದಾರೆ. ಇದರ ಬೆನ್ನಲ್ಲೇ ಅಂಬಟಿ ರಾಯುಡು ಪ್ಯಾನೆಲ್​ನಲ್ಲಿ ಕಾಣುತ್ತಿಲ್ಲ. ಎಲ್ಲಿ ಕಣ್ಮರೆಯಾದರು? ಎಂದು ಜಾಲತಾಣದ ಪೋಸ್ಟ್​ನಲ್ಲಿ ವ್ಯಂಗ್ಯವಾಡಿದ್ದಾರೆ.

ಪಂದ್ಯ ಆರ್​ಸಿಬಿ ಗೆಲುವಿನೊಂದಿಗೆ ಮುಗಿಯುತ್ತಿದ್ದಂತೆ ಅಂಬಟಿ ರಾಯುಡುವನ್ನು ಹುಡುಕಾಡಿದ ಅಭಿಮಾನಿಗಳು, "ಪ್ಯಾನೆಲ್​ನಲ್ಲಿದ್ದವರು ಕಳೆದ ಎರಡು ಗಂಟೆಗಳಿಂದ ಆನ್​ಲೈನ್​ನಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ನಮ್ಮನ್ನು ಸಂಪರ್ಕಿಸಲು ಮರೆಯದಿರಿ. ಅಂಬಟಿ ರಾಯುಡು ಆರಾಮಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ" ಎಂದು ಪೋಸ್ಟ್ ಮೂಲಕ ಟೀಕಿಸಿದ್ದಾರೆ. ಇದನ್ನು ಟ್ರೋಲ್​ ಮಾಡಿದ ಆರ್​ಸಿಬಿ ಅಭಿಮಾನಿ ಬಳಗಕ್ಕೆ ಕಡೆಗೂ ರಾಯುಡು ಪ್ರತಿಕ್ರಿಯಿಸಿದ್ದಾರೆ.

"ಹಹಹಹಹ ಚೆನ್ನಾಗಿದೆ.. @rcbfans.official ತಮಾಷೆ ಅಂದ್ರೆ ಹೀಗೇ ಇರಬೇಕು. ಈ ವರ್ಷ ನಿಮ್ಮ ತಂಡ ಚೆನ್ನಾಗಿದೆ. ಮತ್ತು ಉತ್ತಮ ಫಲಿತಾಂಶವನ್ನೇ ನಿರೀಕ್ಷಿಸಬಹುದು" ಎಂದು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಟ್ರೋಲ್​ ಮಾಡಲಾದ ಪೋಸ್ಟ್​ ಮುಂದಿಟ್ಟು ಬರೆದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net