

ಬೆಂಗಳೂರು: ತಂದೆ ಜಾತಿಯನ್ನು ಜನ್ಮದ ಆಧಾರದ ಮೇಲೆ ಮಕ್ಕಳು ಪಡೆಯುತ್ತಾರೆಯೇ ಹೊರತು, ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದ ವ್ಯಕ್ತಿಯನ್ನು ವಿವಾಹವಾಗಿರುವ ಆಧಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಸ್ಟಿ ಮೀಸಲಾತಿಯಡಿ ಸ್ಪರ್ಧಿಸಿ ಜಯಗಳಿಸಿದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ.ಜಿ. ಅರ್ಚನಾ ಆಯ್ಕೆ ಅಸಿಂಧುಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಕೋರ್ಟ್ ಹೇಳಿದ್ದೇನು?: ಪರಿಶಿಷ್ಟ ಪಂಗಡದ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಕಾರಣ ಆತನ ಸಾಮಾಜಿಕ ಸ್ಥಾನಮಾನವೇ ತಮ್ಮದಾಗಲಿದ್ದು, ಪತಿಯ ಜಾತಿಯೇ ತಮಗೂ ಅನ್ವಯಿಸುತ್ತದೆ ಎಂದು ಅರ್ಜಿದಾರ ಮಹಿಳೆ ವಾದಿಸಿದ್ದಾರೆ. ಆದರೆ, ಸಾಮಾನ್ಯವಾಗಿ ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧರಿಸಲಾಗುತ್ತದೆ. ತಂದೆಯ ಜಾತಿಯನ್ನು ಜನ್ಮದ ಆಧಾರದ ಮೇಲೆ ಮಕ್ಕಳು ಪಡೆಯುತ್ತಾರೆ. ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಆದ್ದರಿಂದ, ಎಸ್ಸಿ ಅಥವಾ ಎಸ್ಟಿ ಸಮುದಾಯದಲ್ಲಿ ಹುಟ್ಟಿದವರು ಮಾತ್ರ ಆ ವರ್ಗಕ್ಕೆ ಮೀಸಲಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸ ಬಹುದಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರದ ಅರ್ಚನಾ, ಎಸ್ಟಿಗೆ ಸೇರಿದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ಕಳೆದ ವರ್ಷ ನಡೆದಿದ್ದ ಗ್ರಾಪಂ ಚುನಾವಣೆಯಲ್ಲಿ ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಅವರ ಆಯ್ಕೆ ಅಸಿಂಧುಗೊಳಿಸುವಂತೆ ಅಭಿಲಾಷಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಅರ್ಚನಾ ಆಯ್ಕೆ ಅಸಿಂಧುಗೊಳಿಸಿ 2022ರ ಫೆ.1ರಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಹಿಳೆಯ ಅರ್ಜಿ ವಜಾ: ಅಪರೂಪದ ಸಂದರ್ಭದಲ್ಲಿ ಒಬ್ಬ ಮಹಿಳೆ ಪತಿಯ ಜಾತಿಯೇ ತಮಗೂ ಅನ್ವಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಜತೆಗೆ, ಚುನಾವಣಾ ನ್ಯಾಯಾಧಿಕರಣದಲ್ಲಿ ವಾದ ಮಂಡನೆಗೆ ಸೂಕ್ತ ಅವಕಾಶ ನೀಡಿಲ್ಲವೆಂದು ಅರ್ಜಿದಾರೆ ಆರೋಪಿಸಿ ದ್ದಾರೆ. ಆದರೆ, ಸೂಕ್ತ ಅವಕಾಶ ನೀಡಿದ್ದರೂ ಅವರು ಗೈರು ಹಾಜರಾಗಿದ್ದಾರೆ. ಅರ್ಜಿದಾರ ಮಹಿಳೆ ಜನಪ್ರತಿನಿಧಿಯಾಗಿದ್ದಾರೆಯೇ ಹೊರತು ಉದಾರತೆ ತೋರಲು ಬಡ ರೈತ ಮಹಿಳೆ ಅಥವಾ ಕಾರ್ವಿುಕಳಲ್ಲ. ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಮಾನತೆ, ಸಾಮಾನ್ಯ ಕಾನೂನು ತತ್ವಗಳಿಗೆ ಸ್ಥಳಾವಕಾಶವಿಲ್ಲ ಎಂಬ ಸರ್ಕಾರದ ಪರ ವಕೀಲರ ವಾದ ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.