VIDEO | ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ; ಗಂಡನ ಕೋಪಕ್ಕೆ ಪುಡಿಯಾಯ್ತು ನಂ.1 ಸ್ಪರ್ಧಿಯ ಮುಡಿಗೇರಬೇಕಿದ್ದ ವಜ್ರದ ಕಿರೀಟ!

Video
Published on

ನವದೆಹಲಿ: ಅಲ್ಲಿ ಸೇರಿದ್ದ ಎಲ್ಲರೂ, ಮಿಸ್ ಗೇ ಮಾಟೊ ಗ್ರೊಸೊ 2023 ಸೌಂದರ್ಯ ಸ್ಪರ್ಧೆಯ ವಿಜೇತೆ ಯಾರೆಂಬ ಕುತೂಹಲದಲ್ಲಿದ್ದರು. ಆದರೆ ಅಂತಿಮ ಹಂತದಲ್ಲಿ ಯಾರೂ ಊಹಿಸಿರದ ಘಟನೆಯೊಂದು ನಡೆದಿದೆ. ವಿಜೇತೆ ಯಾರೆಂದು ಬಹಿರಂಗವಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಏಕಾಏಕಿ ವೇದಿಕೆಗೆ ಬಂದು ವಜ್ರ ಖಚಿತ ಕಿರೀಟವನ್ನು ನೆಲಕ್ಕೆಸೆದಿದ್ದಾನೆ. ಒಂದು ಕ್ಷಣ ಅಲ್ಲಿದ್ದ ಎಲ್ಲರಿಗೂ ಗೊಂದಲ! ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಮಿಸ್ ಗೇ ಮಾಟೊ ಗ್ರೊಸೊ 2023 ಸೌಂದರ್ಯ ಸ್ಪರ್ಧೆಯ ಇಬ್ಬರು ಫೈನಲಿಸ್ಟ್‌ಗಳಾಗಿದ್ದರು. ಅಂತಿಮವಾಗಿ ತೀರ್ಪುಗಾರರು ಇಮಾನ್ಯುಲಿ ಬೆಲಿನಿ ವಿಜೇತೆ ಎಂದು ಘೋಷಣೆ ಮಾಡಿದ್ದಾರೆ. ಅಷ್ಟರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಸ್ಪರ್ಧಿಯ ಪತಿ ಏಕಾಏಕಿ ವೇದಿಕೆ ಮೇಲೆ ಬಂದು ಕಿರೀಟವನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪತ್ನಿ ಎರಡನೇ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಆಕೆಯ ಗಂಡ, ಏಕಾಏಕಿ ವೇದಿಕೆ ಮೇಲೆ ಬಂದಿದ್ದಾನೆ. ಆಕ್ರೋಶ ವ್ಯಕ್ತಪಡಿಸುತ್ತಲೇ, ಬಹುಮಾನವಾಗಿ ಕೊಡಬೇಕಿದ್ದ ಕಿರೀಟವನ್ನು ನೆಲಕ್ಕೆ ಎಸೆದಿದ್ದಾನೆ. ಈ ಘಟನೆ ಅಲ್ಲಿದ್ದ ಪ್ರೇಕ್ಷಕರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಮಾನ್ಯುಲಿ ಬೆಲಿನಿ ವಿಜೇತೆ ಎಂದು ಘೋಷಿಸಿರುವುದು ನ್ಯಾಯವಲ್ಲ ಎಂದು ರನ್ನರ್ ಅಪ್ ಸ್ಪರ್ಧಿಯ ಪತಿ ಆರೋಪಿಸಿದ್ದಾನೆ. ವೇದಿಕೆ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ್ದಲ್ಲದೆ, ಬೆಲೆಬಾಳುವ ಕಿರೀಟವನ್ನು ನಾಶಪಡಿಸಿರುವುದನ್ನು ಖಂಡಿಸುತ್ತೇವೆ ಎಂದು ಸ್ಪರ್ಧೆಯ ಸಂಯೋಜಕ(coordinator) ಮಲೋನ್ ಹೇನಿಶ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net