

Wife Murder: ಮಹಾರಾಷ್ಟ್ರದಲ್ಲಿ ಭಿವಾನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ದೇಹವನ್ನು 17 ಪೀಸ್ ಮಾಡಿ ನಗರದಾದ್ಯಂತ ಎಸೆದ ಘಟನೆ ನಡೆದಿದೆ. ಕಸಾಯಿಖಾನೆ ಪ್ರದೇಶದಲ್ಲಿ ಮಹಿಳೆ ತಲೆ ಪತ್ತೆಯಾದ ಬಳಿಕ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ (ಸೆ. 05) ವರದಿಯಾಗಿದೆ.
ಆಗಸ್ಟ್ 30ರಂದು ಮಹಿಳೆಯ ರುಂಡ ಪತ್ತೆಯಾಗಿತ್ತು. ಪರ್ವಿನ್ ಅಲಿಯಾಸ್ ಮುಸ್ಕಾನ್ (24) ಕೊಲೆಯಾದ ಮಹಿಳೆ. ಚಾಲಕ ಮೊಹಮ್ಮದ್ ತಹಾ ಅನ್ಸಾರಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಪತಿ. ಮುಸ್ಕಾನ್ ತಾಯಿ ಹನೀಫಾ ಖಾನ್ ಪೊಲೀಸರಿಗೆ ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಕೊಲೆಯ ನಂತರ ತನ್ನ ಪತ್ನಿಯ ದೇಹವನ್ನು 17 ತುಂಡುಗಳಾಗಿ ಕತ್ತರಿಸಿರುವುದಾಗಿ, ಅವುಗಳನ್ನು ನಗರದಾದ್ಯಂತ ಎಸೆದಿದ್ದಾಗಿ ಆರೋಪಿ ತಹಾ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎರಡು ವಿಶೇಷ ತನಿಖಾ ತಂಡಗಳನ್ನು (ಎಸ್ಐಟಿ) ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಆರೋಪಿ ನಿರಂತರವಾಗಿ ಹೇಳಿಕೆ ಬದಲಾಯಿಸುತ್ತಿರುವುದರಿಂದ ಮಹಿಳೆಯ ಕೊಲೆಯ ಹಿಂದಿನ ಉದ್ದೇಶವನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಉಳಿದ ದೇಹದ ಭಾಗಗಳನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಈ ಉದ್ದೇಶಕ್ಕಾಗಿ ಡ್ರೋನ್ಗಳು ಮತ್ತು ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೋಯಿವಾಡಾ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಅಶೋಕ್ ರತನ್ಪರ್ಖಿ ಮಾತನಾಡಿ, ಹನೀಫಾ ಖಾನ್ ತನ್ನ ಮಗಳ ಫೋನ್ ಎರಡು ದಿನಗಳವರೆಗೆ ಸ್ವಿಚ್ ಆಫ್ ಆಗಿದ್ದು, ಅಳಿಯನಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಿದ್ದಾರೆ. ಬಳಿಕ ಮುಸ್ಕಾನ್ನ ಕತ್ತರಿಸಿದ ತಲೆಯ ಫೋಟೋವನ್ನು ಅವರಿಗೆ ತೋರಿಸಿದ ಬಳಿಕ ತಮ್ಮ ಮಗಳನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)