

Dewald Brevis: ಬೇಬಿ ಎಬಿಡಿ ಎಂದೇ ಖ್ಯಾತರಾಗಿರುವ ಡೆವಾಲ್ಡ್ ಬ್ರೆವಿಸ್ ತಮ್ಮ ಇತ್ತೀಚಿನ ಐಪಿಎಲ್ನಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಅಲ್ಪಾವಧಿಯ ಅನುಭವದ ಮೇಲೆ ಬೆಳಕು ಚೆಲ್ಲಿದ್ದಾರೆ. ಸಿಎಸ್‌ಕೆ ತಂಡದ ಪರ ಆಡಿರುವುದನ್ನು ತಮ್ಮ ವೃತ್ತಿಜೀವನ ರೂಪಿಸಿದ ಅನುಭವ ಎಂದು ಬಣ್ಣಿಸಿದ್ದಾರೆ.
2025 ರ ಆವೃತಿ ಸಿಎಸ್‌ಕೆ ತಂಡದ ಪಾಲಿಗೆ ನಿರಾಶಾದಾಯಕವಾಗಿತ್ತಾದರೂ, ಎಂಎಸ್ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಅವಿಸ್ಮರಣೀಯ ಎಂದು ಬ್ರೆವಿಸ್ ಹೇಳಿದರು.
ಎಬಿ ಡಿವಿಲಿಯರ್ಸ್ರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬ್ರೆವಿಸ್, ಧೋನಿ ಯಾವಾಗಲೂ ತಂಡದ ಆಟಗಾರರಿಗೆ ಹೇಗೆ ಲಭ್ಯವಿರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು. ಕ್ರಿಕೆಟ್, ಹವ್ಯಾಸಗಳು ಅಥವಾ ಸಾಮಾನ್ಯವಾಗಿ ಜೀವನದ ಬಗ್ಗೆ ಚಾಟ್ ಮಾಡಲು ಅವರನ್ನು ತಮ್ಮ ಕೋಣೆಗೆ ಸ್ವಾಗತಿಸುತ್ತಿದ್ದರು. ಭಾರತದ ಮಾಜಿ ನಾಯಕನ ಉಪಸ್ಥಿತಿಯು ಪಂದ್ಯಗಳಲ್ಲಿರುವಂತೆಯೇ ಮೈದಾನದ ಹೊರಗೂ ಸ್ಪೂರ್ತಿದಾಯಕವಾಗಿದೆ ಎಂದು ಬ್ರೆವಿಸ್ ತಿಳಿಸಿದ್ದಾರೆ.
ಧೋನಿ ನಿದ್ರಿಸುವಾಗ ಬಿಟ್ಟರೆ ಉಳಿದೆಲ್ಲ ಸಮಯ ಅವರ ಕೋಣೆಯ ಬಾಗಿಲು ಸದಾ ತೆರೆದಿರುತ್ತದೆ, ನಾನು ಆಗಾಗ್ಗೆ ಅವರ ಕೋಣೆಯಲ್ಲಿ ಕುಳಿತು ಕ್ರಿಕೆಟ್ ಅಥವಾ ಇತರ ಹವ್ಯಾಸಗಳ ಬಗ್ಗೆ ಮಾತನಾಡುತ್ತಿದ್ದೆ. ಅವರು ಆಟದ ಸಮಯದಲ್ಲಿ ಮತ್ತು ಮಾರ್ಗದರ್ಶನ ನೀಡುವ ಸಮಯದಲ್ಲಿ ಅವರು ಏನು ಮಾಡುತ್ತಾರೆಂದು ಎಲ್ಲರಿಗೂ ತಿಳಿದಿದೆ, ಆದರೆ ಮೈದಾನದ ಹೊರಗೂ ಅವರು ಅಷ್ಟೇ ಸ್ಪೂರ್ತಿದಾಯಕ ವ್ಯಕ್ತಿ, ನಾನು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಕಳೆದ ಕ್ಷಣಗಳು ನಿಜವಾಗಿಯೂ ಬೆಲೆ ಕಟ್ಟಲಾಗದು ಎಂದಿದ್ದಾರೆ.
ಟೂರ್ನಿಯ ಮಧ್ಯೆ ಗುರ್ಜಪ್ನೀತ್ ಸಿಂಗ್ ಬದಲಿಗೆ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಯಿತು, ಅವರು ತಂಡಕ್ಕೆ ತಡವಾಗಿ ಆಯ್ಕೆಯಾದರೂ ಕೂಡ, ಸಿಎಸ್‌ಕೆ ಪರ ತಮ್ಮ ಛಾಪು ಮೂಡಿಸಿದರು. ಆರು ಪಂದ್ಯಗಳಲ್ಲಿ 37.50 ಸರಾಸರಿ ಮತ್ತು 180 ರ ಸ್ಟ್ರೈಕ್ ರೇಟ್‌ನಲ್ಲಿ 225 ರನ್‌ಗಳನ್ನು ಗಳಿಸಿದರು, ಇದು CSK ಯ ಮಧ್ಯಮ ಕ್ರಮಾಂಕಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡಿತು.(ಏಜೆನ್ಸೀಸ್)