

Ajit Pawar: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಸೊಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಅಗೆಯುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಒತ್ತಡ ಹೇರಿದ್ದಾರೆ ಎಂಬ ಘಟನೆಗೆ ಡಿಸಿಎಂ ಪವಾರ್ ಶುಕ್ರವಾರ (ಸೆಪ್ಟೆಂಬರ್ 5) ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಜಿತ್ ಪವಾರ್, ನಮ್ಮ ಪೊಲೀಸ್ ಪಡೆ ಸೇರಿದಂತೆ ಎಲ್ಲ ಅಧಿಕಾರಿಗಳ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದಿದ್ದಾರೆ. ನಿಯಮ ಜಾರಿಯಲ್ಲಿ ಹಸ್ತಕ್ಷೇಪ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ, ಕಾನೂನು ಸುವ್ಯವಸ್ಥೆ ಕಾಯುವುದು ಆಗ ಮುಖ್ಯವಾಗಿತ್ತು ಎಂದು ಹೇಳಿದರು.
ಮಹಿಳಾ ಅಧಿಕಾರಿಗಳನ್ನೊಳಗೊಂಡಂತೆ ಎಲ್ಲರೂ ತಮ್ಮ ತಮ್ಮ ಶ್ರೇಷ್ಠತೆ ಮತ್ತು ಧೈರ್ಯದಿಂದ ಸೇವೆ ಸಲ್ಲಿಸುತ್ತಾರೆ, ನಾನು ಕಾನೂನಿನ ನಿಯಮವನ್ನು ಗೌರವಿಸುತ್ತೇನೆ. ಪಾರದರ್ಶಕ ಆಡಳಿತಕ್ಕೆ ಮತ್ತು ಮರಳು ಗಣಿಗಾರಿಕೆ ಸೇರಿದಂತೆ ಪ್ರತಿಯೊಂದು ಅಕ್ರಮ ಚಟುವಟಿಕೆಯನ್ನು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ನಿಭಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಬದ್ಧನಾಗಿದ್ದೇನೆ ಎಂದರು.
ಎರಡು ದಿನಗಳ ಹಿಂದೆ ಕರ್ಮಲಾ ತಾಲೂಕಿನ ಕುರ್ಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ ಅವರು ರಸ್ತೆ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುವ ಅಕ್ರಮ ಮಣ್ಣು ಉತ್ಖನನದ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಹೋಗಿದ್ದರು.(ಏಜೆನ್ಸೀಸ್)